ನವದೆಹಲಿ : ಕಳೆದ ಏಳೆಂಟು ವರ್ಷಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಹಿನ್ನೆಡೆ ಅನುಭವಿಸುತ್ತಿರುವ ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಗೆ ಈಗಲೇ ಭೂಮಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ.
ಬುಧವಾರ ಕೂಡ ಚುನಾವಣಾ ನಿಪುಣ ಎಂದು ಹೇಳಲಾಗುತ್ತಿರುವ ಪ್ರಶಾಂತ್ ಕಿಶೋರ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರೊಂದಿಗೆ ಪಕ್ಷದ ಪುನಶ್ಚೇತನದ ಬಗ್ಗೆ ಚರ್ಚಿಸಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಹೇಗೆ ಪುನಶ್ಚೇತನಗೊಳ್ಳಬಹುದು ಎಂದು ಏ.16ರಂದು ಮೊದಲ ಬಾರಿಗೆ ಪ್ರಶಾಂತ್ ಕಿಶೋರ್ ವಿವರಣೆ ನೀಡಿದ್ದಾರೆ. ಅಂದಿನಿಂದ ನಿರಂತರವಾಗಿ ಹಿರಿಯ ನಾಯಕರೊಂದಿಗೆ ಸೋನಿಯಾ ಗಾಂಧಿ ಸಭೆ ನಡೆಸುತ್ತಿದ್ದಾರೆ. ಬುಧವಾರ ಕಾಂಗ್ರೆಸ್ಗೆ ಪ್ರಮುಖವಾದ ಮತ್ತು ತಮ್ಮ ಪಕ್ಷ ಆಡಳಿತದಲ್ಲಿರುವ ರಾಜಸ್ಥಾನ ಮತ್ತು ಛತ್ತೀಸ್ಗಢ ಮುಖ್ಯಮಂತ್ರಿಗಳಿಗೆ ಸೋನಿಯಾ ಸಮಾಲೋಚನೆ ನಡೆಸಿದ್ದಾರೆ.
ಗೆಹ್ಲೋಟ್ ಹಾಗೂ ಬಘೇಲ್ ಇಬ್ಬರೂ ಹಿಂದಿ ಭಾಷಿಕ ರಾಜ್ಯಗಳನ್ನು ಪ್ರತಿನಿಧಿಸುವ ಸಿಎಂಗಳು ಆಗಿದ್ದಾರೆ. ಅದಕ್ಕೂ ಮೀಗಿಲಾಗಿ ಸ್ವತಃ ಬಲದೊಂದಿಗೆ ಈ ಎರಡು ರಾಜ್ಯಗಳಲ್ಲಿ ಮಾತ್ರವೇ ಕಾಂಗ್ರೆಸ್ ಅಧಿಕಾರದಲ್ಲಿದ್ದು, 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನವೇ 2023ರಲ್ಲಿ ಎರಡು ಕಡೆ ಕೂಡ ವಿಧಾನಸಭಾ ಚುನಾವಣೆ ನಡೆಯಲಿದೆ. ಆದ್ದರಿಂದ ಪ್ರಶಾಂತ್ ಕಿಶೋರ್ ಜೊತೆಗೆ ಹಾಲಿ ಸಿಎಂಗಳಾದ ಗೆಹ್ಲೋಟ್ ಹಾಗೂ ಬಘೇಲ್ ಸೋನಿಯಾ ಮುಂದಿನ ರಣತಂತ್ರದ ಬಗ್ಗೆ ಸಮಾಲೋಚನೆ ಮಾಡಿದ್ದಾರೆ.
ಮುಂದಿನ ಚುನಾವಣೆಯ ಬಗ್ಗೆ ಪ್ರಶಾಂತ್ ಕಿಶೋರ್ ನೀಡಿರುವ ಕಾರ್ಯಸೂಚಿಗಳನ್ನು ಕಾಂಗ್ರೆಸ್ ಬಹಳ ಗಹನವಾಗಿ ಪರಿಶೀಲಿಸುತ್ತಿದೆ. ಹೀಗಾಗಿ, ಕಳೆದ ಕೆಲವು ದಿನಗಳಿಂದಲೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಸೋನಿಯಾ ಗಂಟೆಗಳ ಕಾಲ ಚರ್ಚಿಸಿದ್ದಾರೆ. ಈಗಾಗಲೇ, ಎಕೆ ಆ್ಯಂಟನಿ, ಅಂಬಿಕಾ ಸೋನಿ, ಮಲ್ಲಿಕಾರ್ಜುನ ಖರ್ಗೆ, ಪಿ.ಚಿದಂಬರಂ, ದಿಗ್ವಿಜಯ್ ಸಿಂಗ್, ಕಮಲ್ ನಾಥ್, ಜೈರಾಮ್ ರಮೇಶ್, ಅಜಯ್ ಮಾಕೇನ್, ಮುಕುಲ್ ವಾಸ್ನಿಕ್ ಮತ್ತು ಕೆಸಿ ವೇಣುಗೋಪಾಲ್ ಸೇರಿದಂತೆ ಇತರ ನಾಯಕರೊಂದಿಗೆ ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ: ಕೋವಿಡ್ ನಾಲ್ಕನೇ ಅಲೆ ಭೀತಿಯಲ್ಲಿ ಇದೆಯೇ ಭಾರತ? ತಜ್ಞರು ಹೇಳುವುದೇನು?