ಉದಯ್ಪುರ(ರಾಜಸ್ಥಾನ): ರಾಜಸ್ಥಾನದ ಉದಯ್‌ಪುರದಲ್ಲಿ ಇಂದಿನಿಂದ 3 ದಿನಗಳ ಕಾಲ ಕಾಂಗ್ರೆಸ್ ‘ಚಿಂತನ್ ಶಿಬಿರ’ ನಡೆಸುತ್ತಿದ್ದು, ಇದರಲ್ಲಿ ಭಾಗಿಯಾಗಿ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಮಾತನಾಡಿದರು. ಈ ವೇಳೆ, ಆಡಳಿತ ಪಕ್ಷ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಗಾಂಧೀಜಿ ಹಂತಕರನ್ನ ಬಿಜೆಪಿ ವೈಭವೀಕರಿಸುವ ಕೆಲಸ ಮಾಡ್ತಿದೆ ಎಂದರು.
ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ ಎಂಬ ಘೋಷವಾಕ್ಯದೊಂದಿಗೆ ಪ್ರಧಾನಿ ಮೋದಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇದರ ನಿಜವಾದ ಅರ್ಥ ಏನು ಎಂಬುದು ಇದೀಗ ಎಲ್ಲರಿಗೂ ಗೊತ್ತಾಗುತ್ತಿದೆ ಎಂದ ಸೋನಿಯಾ ಗಾಂಧಿ, ದ್ವೇಷದ ರಾಜಕಾರಣ ಮಾಡುತ್ತಿರುವುದುದರಿಂದ ಜನರ ಜೀವನದ ಮೇಲೆ ದೊಡ್ಡ ಮಟ್ಟದ ಹಾನಿಯುಂಟಾಗಿದೆ ಎಂದರು. ದ್ವೇಷದ ರಾಜಕಾರಣ ನಡೆಸುತ್ತಿರುವ ಬಿಜೆಪಿ ಜನರ ಜೀವನದ ಮೇಲೆ ದೊಡ್ಡ ಮಟ್ಟದ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಅಭದ್ರತೆ ಸೃಷ್ಟಿ: ದೇಶದ ಜನರು ನಿರಂತರ ಭಯ, ಅಭದ್ರತೆ ಸ್ಥಿತಿಯಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಲ್ಪಸಂಖ್ಯಾತರು ಇನ್ನಿಲ್ಲದ ರೀತಿಯಲ್ಲಿ ದಾಳಿಗೊಳಗಾಗುತ್ತಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ನಡೆಸುತ್ತಿರುವ ಚಿಂತನ್ ಶಿಬಿರ ದೇಶದ ಜನರು ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ: ಉದಯ್‌ಪುರದಲ್ಲಿ ಇಂದಿನಿಂದ 3 ದಿನ ಕಾಂಗ್ರೆಸ್ 'ಚಿಂತನ್ ಶಿಬಿರ': ಚರ್ಚೆಗೆ ಬರುವ ವಿಷಯಗಳೇನು?
ಬಿಜೆಪಿ, ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳ ನೀತಿಗಳ ಪರಿಣಾಮದಿಂದ ದೇಶ ಇಂದು ಅನೇಕ ರೀತಿಯ ಸವಾಲು ಎದುರಿಸುವಂತಾಗಿದೆ. ಇದರ ಮಧ್ಯೆ ನಾವು ಸಂಕಲ್ಪ ಚಿಂತನ್ ಶಿಬಿರ ನಡೆಸುತ್ತಿದ್ದು, ನಮ್ಮ ಪಕ್ಷದ ಮಹತ್ವದ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲು ಇದು ಒಂದು ಮುಖ್ಯ ಸಂದರ್ಭವಾಗಿದೆ ಎಂದರು.
ಮೂರು ದಿನಗಳ ಚಿಂತನ್ ಶಿಬಿರದಲ್ಲಿ ಕೇಂದ್ರ - ರಾಜ್ಯ ಸಂಬಂಧ, ಈಶಾನ್ಯ ರಾಜ್ಯಗಳ ಪರಿಸ್ಥಿತಿ, ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಮತ್ತು ಕೋಮು ಧ್ರುವೀಕರಣದ ಬಗ್ಗೆ ಚರ್ಚಿಸಲಿದ್ದಾರೆ. ಇದರ ಜೊತೆಗೆ ರಾಜಕೀಯ, ಆರ್ಥಿಕ, ರೈತರು, ಯುವಜನತೆ ಮತ್ತು ಸಾಂಸ್ಥಿಕ ವಿಷಯಗಳ ಬಗೆಗೂ ಚರ್ಚಿಸುವ ಸಾಧ್ಯತೆಯಿದೆ.
ಇದಲ್ಲದೇ, ಸಾರ್ವಜನಿಕ ವಲಯದ ಬಂಡವಾಳ ಹಿಂತೆಗೆದುಕೊಳ್ಳುವಿಕೆ, ಏರುತ್ತಿರುವ ಹಣದುಬ್ಬರ, ಅಲ್ಪಸಂಖ್ಯಾತರ ಸಮಸ್ಯೆಗಳು ಮತ್ತು ಮಹಿಳೆಯರ ಸಮಸ್ಯೆಗಳು, ನಿರುದ್ಯೋಗ, ಹೊಸ ಶಿಕ್ಷಣ ನೀತಿ, ಎಂಎಸ್‌ಪಿ ಸಕ್ರಮ, ಸಾಲ ಮನ್ನಾ , ಗೋಧಿ ಬೆಲೆ ವಿಚಾರ ಹಾಗೂ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಸುಧಾರಣೆಗಳ ಬಗ್ಗೆ ಚಿಂತನ ಮಂಥನ ನಡೆಯಲಿದೆ.