ತಿರುವನಂತಪುರ: ಸಿಪಿಐ-ಎಂ ಪಾಲಿಟ್ಬ್ಯೂರೊ ಸದಸ್ಯ ಕೋಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೋಯ್ ಕೋಡಿಯೇರಿ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಕೈಬಿಟ್ಟಿದೆ. ಅತ್ಯಾಚಾರ ಸಂತ್ರಸ್ತೆಗೆ ಆರೋಪಿಯು 80 ಲಕ್ಷ ರೂಪಾಯಿ ನೀಡುವ ಮೂಲಕ ಪ್ರಕರಣವನ್ನು ಎರಡೂ ಕಡೆಯವರು ರಾಜಿ ಮಾಡಿಕೊಂಡಿರುವುದನ್ನು ಪರಿಗಣಿಸಿದ ಕೋರ್ಟ್, ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ. ರಾಜಿ ಸಂಧಾನವನ್ನು ಮುಂಬೈ ಹೈಕೋರ್ಟ್ನ ವಿಭಾಗೀಯ ಪೀಠ ಮಂಗಳವಾರ ಒಪ್ಪಿಕೊಂಡಿದೆ.
ರಾಜಿ ಸಂಧಾನದಲ್ಲಿ ಬಿಹಾರ್ ಮಹಿಳೆಗೆ ಬಿನೋಯ್ 80 ಲಕ್ಷ ರೂಪಾಯಿ ನೀಡಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಬಿನೋಯ್ ತನಗೆ ಮೋಸ ಮಾಡಿರುವುದಾಗಿ ಮಹಿಳೆ 2019ರಲ್ಲಿ ದೂರು ನೀಡಿದ್ದರು. ಇಬ್ಬರ ಸಂಬಂಧದಿಂದ ಮಹಿಳೆಗೆ ಗಂಡು ಮಗು ಹುಟ್ಟಿದ್ದು, ಅದು ತಾಯಿಯೊಂದಿಗೆ ಇದೆ.
2008ರಲ್ಲಿ ದುಬೈನ್ ಡಾನ್ಸ್ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ತಾವಿಬ್ಬರೂ ಆಪ್ತರಾಗಿದ್ದೆವು. 2015ರವರೆಗೂ ಬಿನೋಯ್ ತಮಗೆ ಹುಟ್ಟಿದ ಮಗನ ಪಾಲನೆಗಾಗಿ ಪ್ರತಿತಿಂಗಳು ಹಣ ಕಳುಹಿಸುತ್ತಿದ್ದ ಎಂದು ಮಹಿಳೆ ತನ್ನ ಮೂಲ ಅರ್ಜಿಯಲ್ಲಿ ತಿಳಿಸಿದ್ದಳು.
ತನ್ನ ವಿರುದ್ಧ ಮಹಿಳೆ ದಾಖಲಿಸಿರುವ ಅತ್ಯಾಚಾರ ಪ್ರಕರಣ ಕೈಬಿಡುವಂತೆ ಕೋರಿ ಬಿನೋಯ್ 2019ರ ಜುಲೈನಲ್ಲಿ ಕೋರ್ಟ್ ಮೊರೆ ಹೋಗಿದ್ದರು. ಮೂವರಿಗೂ ಡಿಎನ್‌ಎ ಪರೀಕ್ಷೆ ಮಾಡಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಬಿನೋಯ್ ಜುಲೈ 30, 2019 ರಂದು ಡಿಎನ್ಎ ಟೆಸ್ಟ್ಗೆ ಹಾಜರಾಗಿದ್ದರು. ಡಿಎನ್ಎ ಪರೀಕ್ಷೆಯನ್ನು ಬಹಳ ಹಿಂದೆಯೇ ನಡೆಸಲಾಗಿದ್ದರೂ, ಫಲಿತಾಂಶ ಇನ್ನೂ ಬಂದಿಲ್ಲ.
ಆದರೆ ಈ ಮಧ್ಯೆ ಎರಡು ಪಕ್ಷಗಳವರು (ಬಿನೋಯ್ ಮತ್ತು ಮಹಿಳೆ) ಪ್ರಕರಣವನ್ನು ಇತ್ಯರ್ಥಗೊಳಿಸಲು ನಿರ್ಧರಿಸಿದ್ದು, ಅದರ ಬಗ್ಗೆ ಮುಂಬೈ ಹೈಕೋರ್ಟ್‌ಗೆ ತಿಳಿಸಿದರು. ನ್ಯಾಯಾಲಯ ಅದಕ್ಕೆ ಒಪ್ಪಿಗೆ ಸೂಚಿಸಿದ್ದು ಅರ್ಜಿ ಇತ್ಯರ್ಥಗೊಂಡಿದೆ.
ಅನಾರೋಗ್ಯದ ಕಾರಣ ಕಳೆದ ತಿಂಗಳು ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೊಡಿಯೇರಿ ಬಾಲಕೃಷ್ಣನ್ ಪ್ರಸ್ತುತ ಚೆನ್ನೈನ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಗಂಡು ಮಕ್ಕಳಿಂದ ಆಗಾಗ ತೊಂದರೆ ಎದುರಿಸುತ್ತಿರುವ ಅವರಿಗೆ ಈ ರಾಜಿ ಸಂಧಾನ ಸಾಕಷ್ಟು ಸಮಾದಾನ ತಂದಿದೆ.
ಅವರ ಕಿರಿಯ ಮಗ ಬಿನೀಶ್ ಕೊಡಿಯೇರಿಯನ್ನು ಅಕ್ಟೋಬರ್ 2020 ರಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಿತ್ತು. ಒಂದು ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ನಂತರ ಆತನಿಗೆ ಜಾಮೀನು ಸಿಕ್ಕತ್ತು.
ಇದನ್ನೂ ಓದಿ: DRUGS CASE: ಕೇರಳದ ಮಾಜಿ ಗೃಹ ಸಚಿವರ ಪುತ್ರ ಬಿನೀಶ್ ಕೋಡಿಯೇರಿಗೆ ಜಾಮೀನು