ಗಾಜಿಯಾಬಾದ್/ನವದೆಹಲಿ: ಮನೆಯ ಬಾಗಿಲು ಮತ್ತು ಗೇಟ್ಗೆ ಬೀಗ- ಸರಪಳಿ ಜಡಿದು ವೃದ್ಧ ತಾಯಿಯನ್ನು ಹಿರಿಯ ಮಗ ಬಂಧಿಯಾಗಿಸಿರುವ ಹೃದಯ ವಿದ್ರಾವಕ ಘಟನೆ ಗಾಜಿಯಾಬಾದ್ನ ಲೋನಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಎರಡು ದಿನಗಳ ಹಿಂದೆ ಮನೆಯಿಂದ ಕಿರುಚಾಟದ ಶಬ್ಧ ಕೇಳಿಸಿದ್ದು, ಸ್ಥಳೀಯರು ಮನೆ ಮುಂದೆ ಬಂದಿದ್ದಾರೆ. ಇಣುಕಿ ನೋಡಿದಾಗ ಅಜ್ಜಿಯೊಬ್ಬರು ಒಳಗಡೆ ಇರುವುದು ತಿಳಿದು ಬಂದಿದೆ. ಆಕೆಯನ್ನು ಮಾತನಾಡಿಸಿದಾಗ, ತನ್ನ ಹಿರಿಯ ಮಗ ತನ್ನನ್ನು ಹೊಡೆದು, ಮನೆಯಲ್ಲಿ ಬಂಧಿಸಿರುವುದಾಗಿ, ಬಾಯಾರಿಕೆ - ಹಸಿವಿನಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಕೆಲವರು ಮೊಬೈಲ್ನಲ್ಲಿ ದೃಶ್ಯವನ್ನ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನಿಂದ ಬೀಗ ಒಡೆದು ವೃದ್ಧೆಯನ್ನು ಹೊರಗೆ ಕರೆತಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇನ್ನು ಈ ವೃದ್ಧೆಯ ಕಿರಿಯ ಮಗ ಕೆಲ ಸಮಯದ ಹಿಂದೆ ನಿಧನರಾಗಿದ್ದು, ಹಿರಿಯ ಮಗ ದೆಹಲಿಯಲ್ಲಿ ವಾಸಿಸುತ್ತಿದ್ದಾನೆ. ಲೋನಿ ಪ್ರದೇಶದಲ್ಲಿರುವ ಈ ಮನೆಯನ್ನು ಮಾರಲು ಹಾಗೂ ತಾಯಿಯನ್ನು ತನ್ನೊಂದಿಗೆ ದೆಹಲಿಗೆ ಬರಲು ಹಿರಿಯ ಮಗ ಹೇಳಿದ್ದು, ಇದಕ್ಕೆ ನಿರಾಕರಿಸಿದ್ದಕ್ಕೆ ಹೀಗೆ ಮಾಡಿದ್ದಾನೆ ಎಂದು ಹೇಳಲಾಗಿದೆ.