ಗೋರಖ್‌ಪುರ(ಉತ್ತರ ಪ್ರದೇಶ): ಗುಲ್ರಿಹಾ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ಶಹಬಾಜ್‌ಗಂಜ್‌ನಲ್ಲಿ ಪುತ್ರನೊಬ್ಬ ತಾಯಿಯ ಮೃತದೇಹವನ್ನು 4 ದಿನಗಳ ಕಾಲ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದಾನೆ. ಕೆಟ್ಟ ವಾಸನೆ ಬಂದಾಗ ಅಲ್ಲಿ ಅಗರಬತ್ತಿ ಹಚ್ಚುತ್ತಿದ್ದ ಎಂದು ತಿಳಿದುಬಂದಿದೆ. ಹಣದ ದುರಾಸೆಯಿಂದ ತಾಯಿಯನ್ನು ಕೊಂದು ಹೀಗೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಮಂಗಳವಾರ ದುರ್ವಾಸನೆ ಬರುತ್ತಿದ್ದಂತೆ ಸುತ್ತಮುತ್ತಲಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೂಲಗಳ ಪ್ರಕಾರ, ಶಿವಪುರ ಶಹಬಾಜ್‌ಗಂಜ್ ನಿವಾಸಿ ರಾಮ್ ದುಲಾರೆ ಮಿಶ್ರಾ ಬೋದರ್‌ಬಾರ್‌ನಲ್ಲಿರುವ ಇಂಟರ್ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರು. ಅವರ ಪತ್ನಿ ಶಾಂತಿ ದೇವಿ (82) ಗೋರಖ್‌ಪುರದ ಸರ್ಕಾರಿ ಎಡಿ ಇಂಟರ್ ಕಾಲೇಜಿನಲ್ಲಿ ಶಿಕ್ಷಕಿ. ಇವರ ಮೃತದೇಹ ಮಂಗಳವಾರ ಅವರ ಮನೆಯ ಆಸನವೊಂದರ ಕೆಳಗೆ ಪತ್ತೆಯಾಗಿದೆ. ಪ್ರಕರಣದಲ್ಲಿ ಮಗನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.
ಇದೇ ವೇಳೆ ಅಕ್ಕಪಕ್ಕದ ಜನರು ಶಾಂತಿ ದೇವಿ ಅವರ 45 ವರ್ಷದ ಮಗ ನಿಖಿಲ್ ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ. ನಿಖಿಲ್ ಮಾದಕ ವ್ಯಸನಿಯಾಗಿದ್ದು, ಆಗಾಗ್ಗೆ ತನ್ನ ತಾಯಿಯನ್ನು ಥಳಿಸುತ್ತಿದ್ದ ಎಂದು ಹೇಳಿದ್ದಾರೆ. ಪ್ರಕರಣದ ಪೊಲೀಸ್ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ತಂದೆಯ ಹಣ ಮರು ಹೊಂದಿಸಲು ಮಗಳ ಸರ್ಕಸ್; ಕಿಡ್ನಿ ಮಾರಲು ಮುಂದಾಗಿ ಮೋಸದ ಜಾಲಕ್ಕೆ ಬಿದ್ದಳು!