ಬಸ್ತಾರ್: ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ವಿಶೇಷ ಪ್ರಕರಣವೊಂದು ನಡೆದಿದೆ. ಮಗನೊಬ್ಬ ತನಗೆ ಜನ್ಮನೀಡಿದ ವ್ಯಕ್ತಿಯಿಂದ ಹಕ್ಕು ಪಡೆಯಲು ಡಿಎನ್‌ಎ ಪರೀಕ್ಷೆಯ ಮೊರೆಹೋಗಿ ಯಶಸ್ವಿಯಾಗಿದ್ದಾನೆ. ಮಗ ಮತ್ತು ತಂದೆಯ ವರದಿಯು ಪಾಸಿಟಿವ್ ಬಂದ ನಂತರ ಮಗನಿಗೆ ನಿರ್ವಹಣಾ ವೆಚ್ಚ ಮತ್ತು ಆಸ್ತಿ ಹಕ್ಕುಗಳನ್ನು ನೀಡುವಂತೆ ತಂದೆಗೆ ನ್ಯಾಯಾಲಯ ಆದೇಶಿಸಿದೆ.
ವಿವರ: ಬಸ್ತಾರ್‌ನ ಬಕ್‌ವಾಂಡ್ ಬ್ಲಾಕ್‌ನ ಮಾರೆತ್ ಗ್ರಾಮದ ನಿವಾಸಿ ಶೋಭರಾಮ್ ಎಂಬಾತ ಅದೇ ಗ್ರಾಮದ ಯುವತಿಯೊಂದಿಗೆ 20 ವರ್ಷಗಳ ಹಿಂದೆ ವಿವಾಹವಾಗಿದ್ದ. 2015ರಲ್ಲಿ ಶೋಭರಾಮ್ ತನ್ನ ಹೆಂಡತಿಯ ಶೀಲ ಶಂಕಿಸಿ ಹುಟ್ಟಿದ ಮಗನನ್ನೇ ತನ್ನ ಮಗನಲ್ಲ ಎಂದು ಹೇಳಿ ಬೇರೆಯಾಗಿ ವಾಸ ಮಾಡಲು ಮುಂದಾಗಿದ್ದನು.
14 ಫೆಬ್ರವರಿ 2017 ರಂದು ಮಹಿಳೆ ಮತ್ತು 16 ವರ್ಷದ ಮಗ ಖೇಮ್ರಾಜ್ ಸೆಕ್ಷನ್ 125 ರ ಅಡಿಯಲ್ಲಿ ನಿರ್ವಹಣೆ ವೆಚ್ಚಕ್ಕಾಗಿ ವಕೀಲರ ಮೂಲಕ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ನ್ಯಾಯಾಲಯವು ಡಿಎನ್‌ಎ ಪರೀಕ್ಷೆಗೆ ಆದೇಶಿಸಿದೆ. ಆದರೆ, ಡಿಎನ್‌ಎ ಪರೀಕ್ಷೆಗೆ ಒಳಗಾಗಲು ಮಹಿಳೆಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇದಾದ ನಂತರ ಬಸ್ತಾರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆರ್ಥಿಕ ಸಹಕಾರದಿಂದ ಡಿಎನ್‌ಎ ಪರೀಕ್ಷೆ ನಡೆದಿತ್ತು. ಇದರ ವರದಿ ಪಾಸಿಟಿವ್ ಬಂದಿದ್ದು, ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಪ್ರಕರಣದಲ್ಲಿ ಹಿರಿಯ ವಕೀಲ ರಮೇಶ್ ಪಾಣಿಗ್ರಾಹಿ, ಅರ್ಜಿದಾರೆ ಘಿನಿ ಬಾಯಿ ಅವರ ಪರ ಪಾದ ಮಾಡಿ ಗೆದ್ದಿದ್ದಾರೆ. ಮಾಸಿಕ 2000 ರೂಪಾಯಿ ಜೀವನಾಂಶ ನೀಡುವಂತೆ ಕೋರ್ಟ್ ಆದೇಶಿಸಿದೆ. ಹಾಗೆಯೇ ಆಸ್ತಿಯಲ್ಲಿ ಹಕ್ಕನ್ನೂ ನೀಡಲಾಗಿದೆ.
ಸದ್ಯ ಆಕೆ ಬೇರೊಬ್ಬ ಪುರುಷನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿರುವುದರಿಂದ ಜೀವನಾಂಶ ನೀಡಲಾಗಿಲ್ಲ. ಆಕೆ ತನ್ನ ಮೊದಲ ಪತಿಯೊಂದಿಗೆ ಕಾನೂನುಬದ್ಧವಾಗಿ ಮದುವೆಯಾಗಿರಲಿಲ್ಲ ಎಂಬುದು ಸಹ ಗಮನಾರ್ಹ.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ಹರಿದುಬಂತು ದೇಣಿಗೆ: 11 ಕೋಟಿ ಜನರಿಂದ ಸಂಗ್ರಹವಾದ ಹಣವೆಷ್ಟು ಗೊತ್ತಾ!?