ರಾಜಸ್ಥಾನ: ತಾಯಿಗೆ ತಮ್ಮ ಮಕ್ಕಳು ತನ್ನನ್ನು ಎಷ್ಟು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂಬುದೇ ದೊಡ್ಡ ಉಡುಗೊರೆ. ಮಕ್ಕಳು ತಾಯಿಯ ಮೇಲಿನ ಮಮತೆಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ರಾಜಸ್ಥಾನದ ಅಜ್ಮೀರ್ನಲ್ಲೊಬ್ಬ ಮಗ ತನ್ನ ತಾಯಿ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ದಿನ ವಿಶೇಷ ಉಡುಗೊರೆ ನೀಡಿದ್ದಾನೆ. ಹೌದು, ಶಿಕ್ಷಕಿಯಾಗಿ ನಿವೃತ್ತಿಯಾದ ತಾಯಿಯನ್ನು ಹೆಲಿಕಾಪ್ಟರ್ ಮೂಲಕ ಮನೆಗೆ ಕರೆದುಕೊಂಡು ಬಂದು ಮೆಚ್ಚುಗೆ ಗಳಿಸಿದ್ದಾರೆ.
ಈ ಯುವಕನ ಹೆಸರು ಯೋಗೇಶ್ ಚೌಹಾಣ್. ಶಾಲಾ ಶಿಕ್ಷಕಿ ಸುಶೀಲಾ ಚೌಹಾಣ್ ಅವರು ರಾಜಸ್ಥಾನದ ಅಜ್ಮೀರ್‌ನ ಪಿಸಂಗನ್‌ನ ಕೇಸರಪುರ ಪ್ರೌಢಶಾಲೆಯಲ್ಲಿ 33 ವರ್ಷಗಳ ಸೇವೆಯ ಬಳಿಕ ಶನಿವಾರ ನಿವೃತ್ತರಾಗಿದ್ದರು. ತನ್ನ ತಾಯಿ ನಿವೃತ್ತಿಯಾದ ದಿನವನ್ನು ಸ್ಮರಣೀಯವಾಗಿ ಮಾಡಬೇಕು ಎಂದು ನಿರ್ಧರಿಸಿದ್ದ ಯೋಗೇಶ್, ತಾಯಿ ಮನೆಗೆ ಬರಲು ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ತಾಯಿಯನ್ನು ಶಾಲೆಯಿಂದ ಮನೆಗೆ ಕರೆತರಲು ಯೋಗೇಶ್ ಆಡಳಿತದಿಂದ ವಿಶೇಷ ಅನುಮತಿಯನ್ನೂ ಪಡೆದಿದ್ದರು.
ಯೋಗೇಶ್ ಚೌಹಾಣ್ ವೃತ್ತಿಯಲ್ಲಿ ಇಂಜಿನಿಯರ್. ಪ್ರಸ್ತುತ ಅಮೆರಿಕದಲ್ಲಿ ಕೆಲಸದಲ್ಲಿದ್ದಾರೆ. ತಮ್ಮ ತಾಯಿ ನಿವೃತ್ತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಬಂದಿದ್ದರು. ತಾಯಿಯನ್ನು ಹೆಲಕಾಪ್ಟರ್ನಲ್ಲಿ ಕರೆತಂದುದರ ಬಗ್ಗೆ ಖುಷಿ ಹಂಚಿಕೊಂಡಿರುವ ಅವರು, "ಈ ಸಮಯದಲ್ಲಿ ಇಷ್ಟೊಂದು ಜನಸಂದಣಿ ಇರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನನ್ನೊಂದಿಗೆ ಊರಿನವರೂ ಸಂಭ್ರಮಿಸಿರುವುದು ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: YouTube ನೋಡಿ ಲಾಕ್ಡೌನ್ ವೇಳೆ ವಿಮಾನ ನಿರ್ಮಾಣ.. ಕುಟುಂಬದೊಂದಿಗೆ ಕೇರಳಿಗನ ಪ್ರಪಂಚ ಪರ್ಯಟನೆ