ಪ್ರಯಾಗ್‌ರಾಜ್: ತನಗೆ ಬರುತ್ತಿದ್ದ ಬೆದರಿಕೆ ಕರೆಗಳಿಂದ ತಪ್ಪಿಸಿಕೊಳ್ಳಲು ಯುವಕನೊಬ್ಬ ತಾನೇ ಅಪಹರಣಕಾರ ಎಂದು ಬಿಂಬಿಸಿಕೊಂಡು, ತಂದೆಯಿಂದ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೇಚಿಗೆ ಸಿಲುಕಿದ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ನಕಲಿ ಅಪಹರಣಕಾರನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ವಾಸವಿದ್ದ ಆರೋಪಿ ಅಭಿಷೇಕ್ ತಿವಾರಿ, ತನ್ನ ತಂದೆ ಜ್ಯೋತಿಶ್ ತಿವಾರಿಗೆ ವಾಟ್ಸ್ಆ್ಯಪ್ ಕರೆ ಮಾಡಿ ಕೆಲವರು ತನ್ನನ್ನು ಕಪ್ಪುಬಟ್ಟೆಯಲ್ಲಿ ಸುತ್ತಿ ಅಪಹರಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ನಿರ್ಜನ ಪ್ರದೇಶದಲ್ಲಿ ತನ್ನನ್ನು ಇಡಲಾಗಿದೆ ಎಂದು ಅಪಹರಣಗೊಂಡ ಅಭಿಷೇಕ್ ತಿಳಿಸಿದ್ದಾನೆ. ಬಳಿಕ ಅಪಹರಣಕಾರನಂತೆ 2 ಲಕ್ಷ ರೂಪಾಯಿ ಕೊಡಲು ಬೇಡಿಕೆ ಇಟ್ಟಿದ್ದಾನೆ. ಬಳಿಕ ಎರಡನೇ ಬಾರಿ ಕರೆ ಮಾಡಿ 2 ಲಕ್ಷ ನೀಡದಿದ್ದರೆ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಅಪಹರಣಕಾರನ ಬೆದರಿಕೆಯಿಂದಾಗಿ ಅಭಿಷೇಕ್ ಅವರ ತಂದೆ ಭಯಗೊಂಡು ಮಗ ಉಳಿದಿದ್ದ ಪ್ರಯಾಗ್‌ರಾಜ್ ಬಂದು ಪರಿಶೀಲಿಸಿದ್ದಾನೆ. ಅಲ್ಲಿ ಮಗ ಇಲ್ಲದಿರುವುದು ಭೀತಿ ಮೂಡಿಸಿದೆ. ಬಳಿಕ ಪುತ್ರ ಅಪಹರಣವಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಹರಣಕಾರನ ಬೆನ್ನತ್ತಿದ್ದ ಪೊಲೀಸ್: ಹಗಲು ಹೊತ್ತಿನಲ್ಲಿ ಅಪಹರಣದ ದೂರು ಪಡೆದ ಪೊಲೀಸರು ಚುರುಕಾಗಿದ್ದಾರೆ. ಕ್ರೈಂ ಬ್ರಾಂಚ್ಗೂ ಕೂಡ ಪ್ರಕರಣದ ಮಾಹಿತಿ ನೀಡಲಾಗಿದೆ. ಬಳಿಕ ತನಿಖೆ ನಡೆಸಿ, ಅಪಹರಣಕಾರನನ್ನು ಹಿಡಿಯಬೇಕು ಎಂಬುವಷ್ಟರಲ್ಲಿ ಕತೆಯೇ ಬದಲಾಗಿದೆ. ಕಿಡ್ನ್ಯಾಪ್ ಆಗಿದ್ದ ಅಭಿಷೇಕ್ ಅಪಹರಣದ ನಕಲಿ ನಾಟಕ ಬಯಲಾಗಿದೆ. ತನ್ನ ತಂದೆಯಿಂದ ತಾನೇ 2 ಲಕ್ಷ ರೂಪಾಯಿ ಸುಲಿಗೆಗೆ ಮುಂದಾಗಿದ್ದು ಗೊತ್ತಾಗಿದೆ.
ನಕಲಿ ಅಪಹರಣ ನಾಟಕ ಬಯಲು: ತನ್ನನ್ನು ಅಪಹರಣ ಮಾಡಲಾಗಿದೆ ಎಂದು ಬಿಂಬಿಸಿ ಪ್ರತಾಪ್‌ಗಢ ಜಿಲ್ಲೆಯಲ್ಲಿ ಅಡಗಿಕೊಂಡಿದ್ದ ಅಭಿಷೇಕ್ ತಿವಾರಿಯನ್ನು ಪೊಲೀಸರು ಪತ್ತೆ ಮಾಡಿದಾಗ ಆತನೊಬ್ಬನೇ ಸ್ಥಳದಲ್ಲಿ ಪತ್ತೆಯಾಗಿದ್ದ. ಅಪಹರಣಕಾರ ಮಾಡಿದ ತಂಡ, ಕಾರು ಅಲ್ಲಿರಲಿಲ್ಲ. ಅಭಿಷೇಕ್ನನ್ನು ಹಿಡಿದು ವಿಚಾರಿಸಿದಾಗ ಪ್ರಕರಣದ ಅಸಲಿ ಸತ್ಯ ಬಯಲಾಗಿದೆ. ತಾನು ನಕಲಿ ವಿಡಿಯೋ ಕಾಲ್ನಿಂದಾಗಿ ಬೆದರಿಕೆಗೆ ಒಳಗಾಗಿದ್ದೆ. ಹೀಗಾಗಿ ಹಣದ ಬೇಡಿಕೆ ಇಟ್ಟಿದ್ದೆ ಎಂಬ ಬಗ್ಗೆ ಬಾಯ್ಬಿಟ್ಟಿದ್ದಾನೆ.
ವಿಡಿಯೋ ಕಾಲ್ ಬೆದರಿಕೆ: ಅಂಕಿತಾ ಶರ್ಮಾ ಎಂಬ ಹುಡುಗಿಯೊಂದಿಗೆ ಅಭಿಷೇಕ್ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿಕೊಂಡಿದ್ದ. ಇದಾದ ಬಳಿಕ ಯುವತಿ ವಾಟ್ಸ್ಆ್ಯಪ್ ನಂಬರ್ ತೆಗೆದುಕೊಂಡು ವಿಡಿಯೋ ಕಾಲ್ ಮಾಡಿದ್ದಳು. ಈ ವೇಳೆ ಹುಡುಗಿ ಕಾಲ್ನಲ್ಲಿ ವಿವಸ್ತ್ರಳಾಗಿದ್ದಳು. ಇದನ್ನು ಕಂಡ ಅಭಿಷೇಕ್ ಹೆದರಿ ಕಾಲ್ ಡಿಸ್ಕನೆಕ್ಟ್ ಮಾಡಿದ್ದ. ಇದಾದ ಸ್ವಲ್ಪ ಸಮಯದ ಬಳಿಕ ಇನ್ನೊಂದು ಕರೆ ಬಂದಾಗಲೇ ವಿಡಿಯೋ ರೆಕಾರ್ಡ್ ಆಗಿದ್ದು ಗೊತ್ತಾಗಿದೆ.
ಯುವತಿಯೊಂದಿಗಿನ ನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುವುದು ಎಂದು ಅಭಿಷೇಕ್ಗೆ ಬೆದರಿಕೆ ಹಾಕಲಾಗಿದೆ. ಮಾನನಷ್ಟಕ್ಕೆ ಹೆದರಿದ ಅಭಿಷೇಕ್ ಬ್ಲ್ಯಾಕ್ ಮೇಲ್ ಮಾಡಿದವರಿಗೆ 30 ಸಾವಿರ ನೀಡುವುದಾಗಿ ಒಪ್ಪಿಕೊಂಡಿದ್ದ. ಇದರ ಬಳಿಕವೂ ಅಭಿಷೇಕ್ಗೆ ನಿರಂತರ ಕರೆಗಳು ಬಂದಿವೆ. ತನ್ನನ್ನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಇದರಿಂದಾಗಿ ಹಣ ಹೊಂದಿಸಲು ತಾನು ಅಪಹರಣವಾಗಿದ್ದಾಗಿ ನಾಟಕವಾಡಿದೆ. ತಂದೆಯಿಂದ ಹಣ ಪಡೆದುಕೊಳ್ಳಲು ಈ ರೀತಿ ಮಾಡಿದೆ ಎಂದು ಬಾಯ್ಬಿಟ್ಟಿದ್ದಾನೆ. ಇದರೊಂದಿಗೆ ಪೊಲೀಸರು ಅಭಿಷೇಕ್ಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ತಂಡದ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಬೆದರಿಕೆ ಕರೆಗಳಿಗೆ ಹೆದರಬೇಡಿ. ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿ ಮತ್ತು ಕರೆ ಮಾಡುವ ಬ್ಲ್ಯಾಕ್‌ಮೇಲರ್ ಅನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿ ಎಂದು ಸಲಹೆ ನೀಡಿದ್ದಾರೆ.