ಸೋಲನ್ (ಹಿಮಾಚಲ ಪ್ರದೇಶ) : ಇಂದಿನ ದಿನಮಾನಗಳಲ್ಲಿ ಯುವಕರು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ಬರುವುದು ಸಾಮಾನ್ಯ. ನಗರದಲ್ಲಿನ ಹೆಸರಾಂತ ಕಂಪನಿಗಳಲ್ಲಿ ಉತ್ತಮ ಸಂಬಳ ಪಡೆಯುವ ಕನಸು ಕಾಣುತ್ತಾರೆ. ತಾವು ನಿರೀಕ್ಷಿಸಿದಂತೆ ಉದ್ಯೋಗ ಲಭಿಸದಿದ್ದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇನ್ನು ಕೆಲವರು ತಮಗೆ ದೊಡ್ಡ ಕಂಪನಿಗಳಲ್ಲಿ ಉದ್ಯೋಗವಿದ್ದರೂ ಮನಸ್ಸಿಗೆ ಸಮಾಧಾನವಿಲ್ಲದೆ ಪರದಾಡುತ್ತಿದ್ದಾರೆ. ಇದರಲ್ಲಿ ಕೆಲವರು ಮಾತ್ರ ತಮಗೆ ಬೇಕಾದ ಪರ್ಯಾಯ ದಾರಿ ಕಂಡುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಐಟಿ ಉದ್ಯೋಗಿಯೊಬ್ಬರು ಕಂಪನಿಯಲ್ಲಿ ಉದ್ಯೋಗ ತೊರೆದು ಇಂದು ಸಾವಯವ ಕೃಷಿಯಲ್ಲಿ ತೊಡಗಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಸೋಲನ್ ಜಿಲ್ಲೆಯ ಶಿಲ್ಲಿ ಗ್ರಾಮದ ನಿವಾಸಿಯಾಗಿರುವ ಮನ್ದೀಪ್ ವರ್ಮಾ ಬೆಂಗಳೂರಿನಲ್ಲಿ ಐಟಿ ಉದ್ಯೋಗದಲ್ಲಿದ್ದರು. ಬಳಿಕ ಈ ಉದ್ಯೋಗ ತೊರೆದು ಇಂದು ಕಿವಿ ಹಣ್ಣಿನ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಈ ಮೂಲಕ ಉದ್ಯೋಗಕ್ಕಾಗಿ ನಗರಗಳಲ್ಲಿ ಅಳೆಯುವ ಯುವಕರಿಗೆ ಮಾದರಿಯಾಗಿದ್ದಾರೆ.
![solan-kiwi-cultivation-engineer-farmer-mandeep-verma-in-solan-natural-farming-of-kiwi-in-solan](https://etvbharatimages.akamaized.net/etvbharat/prod-images/05-10-2023/19688362_ttt.jpg)
ಮನ್ದೀಪ್ ತಮ್ಮ ಉನ್ನತ ವಿದ್ಯಾಭ್ಯಾಸದ ಬಳಿಕ ದೆಹಲಿ ಮತ್ತು ಬೆಂಗಳೂರಿನಲ್ಲಿ ಉದ್ಯೋಗ ಮಾಡಿದ್ದರು. ಪ್ರತಿಷ್ಠಿತ ವಿಪ್ರೋ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಕೈ ತುಂಬಾ ಸಂಬಳವನ್ನೂ ಪಡೆಯುತ್ತಿದ್ದರು. ಆದರೆ ಮನಸ್ಸಿನೊಳಗೆ ಏನೋ ಒಂದು ರೀತಿಯ ಕೊರತೆ ಅವರನ್ನು ಸದಾ ಕಾಡುತ್ತಿತ್ತಂತೆ. ಹಿಮಾಚಲದ ಮಣ್ಣಿನ ಸುಗಂಧ ಕೈಬೀಸಿ ಕರೆಯುತ್ತಿತ್ತು. ಕೊನೆಗೆ ದೃಢ ನಿರ್ಧಾರ ಮಾಡಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ತನ್ನೂರಿಗೆ ಮರಳಿದರು. ಇಲ್ಲಿ ತಮಗೆ ಪಿತ್ರಾರ್ಜಿತವಾಗಿ ಬಂದ ಐದು ಎಕರೆ ಜಮೀನಿನಲ್ಲಿ ಕಿವಿ ಹಣ್ಣನ್ನು ಬೆಳೆಯಲು ನಿರ್ಧರಿಸಿದರು. ಇದೀಗ ಕಿವಿ ಬೇಸಾಯದಿಂದ ವರ್ಷಕ್ಕೆ ಲಕ್ಷಾಂತರ ರೂ ಆದಾಯ ಗಳಿಸುತ್ತಿದ್ದಾರೆ. ಗ್ರಾಮದ ನಾಲ್ವರಿಗೆ ಉದ್ಯೋಗವನ್ನೂ ನೀಡಿದ್ದಾರೆ.
ಕಿವಿ ಕೃಷಿಗೆ ವಿಜ್ಞಾನಿಗಳ ನೆರವು: ಮನ್ದೀಪ್ ಅವರಿಗೆ ಐಟಿ ಉದ್ಯೋಗವನ್ನು ತೊರೆದು ಸಾವಯವ ಕೃಷಿ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ವರ್ಷಾನುಗಟ್ಟಲೆ ಬರಡಾಗಿದ್ದ ಭೂಮಿಯನ್ನು ಕೃಷಿಗೆ ಯೋಗ್ಯವಾಗಿಸುವುದೂ ಸವಾಲಿನ ಕೆಲಸವೇ ಆಗಿತ್ತು. ಈ ಭೂಮಿಯನ್ನು ಸಜ್ಜುಗೊಳಿಸಲು ಲಕ್ಷಾಂತರ ರೂ ವ್ಯಯಿಸಿದರು. ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗುವ ಬಗ್ಗೆ ನೌನಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಜೊತೆ ಚರ್ಚಿಸಿದರು. ವಿಜ್ಞಾನಿಗಳು ಮಣ್ಣಿನ ಗುಣವನ್ನು ಪರಿಶೀಲಿಸಿ ಕಿವಿ ಹಣ್ಣನ್ನು ಬೆಳೆಯುವಂತೆ ಮಂದೀಪ್ ಅವರಿಗೆ ಸೂಚಿಸಿದ್ದಾರೆ. ಆ ಮೂಲಕ ಸಾವಯವ ಕೃಷಿ ಮೂಲಕ ಕಿವಿ ಹಣ್ಣು ಬೆಳೆಯಲು ಪ್ರಾರಂಭಿಸಿದರು.
![solan-kiwi-cultivation-engineer-farmer-mandeep-verma-in-solan-natural-farming-of-kiwi-in-solan](https://etvbharatimages.akamaized.net/etvbharat/prod-images/05-10-2023/19688362_cffsf.jpg)
ಕೈ ಹಿಡಿದ ಸಾವಯವ ಕೃಷಿ: ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಕೃಷಿ ಭೂಮಿಗಳ ಫಲವತ್ತತೆ ಕುಂಠಿತವಾಗುತ್ತಿದ್ದುದನ್ನು ಮನಗಂಡಿದ್ದ ಮನ್ದೀಪ್ ವರ್ಮಾ ಸಾವಯವ ಕೃಷಿ ಮೂಲಕ ಕಿವಿ ಹಣ್ಣು ಬೆಳೆಯಲು ನಿರ್ಧರಿಸಿದರು. ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿದಾಗ ಅವರು ಸುಭಾಷ್ ಪಾಳೇಕರ್ ಎಂಬವರ ಬಳಿ ಸಾವಯವ ಕೃಷಿ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿದರು. ಇವರ ಅನುಭವದಿಂದ ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲದೆ ಕಿವಿ ಕೃಷಿಯನ್ನು ಪ್ರಾರಂಭಿಸಿದರು. ಕಿವಿ ಹಣ್ಣಿನ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಆ್ಯಪಲ್ ಬೆಳೆದರು. ಇದಕ್ಕೆ ದೇಸಿ ಹಸುವಿನ ಸೆಗಣಿ ಮತ್ತು ಮೂತ್ರವನ್ನು ಬಳಸಿದರು. ಇದರಿಂದ ಗಿಡಗಳಲ್ಲಿ ಉತ್ತಮ ಬೆಳವಣಿಗೆ ಮತ್ತು ಮಣ್ಣಿನಲ್ಲಿ ಫಲವತ್ತತೆಯಲ್ಲಿ ಹೆಚ್ಚಳವಾಯಿತು.
₹40 ಲಕ್ಷಕ್ಕೂ ಅಧಿಕ ಆದಾಯ: ಇದೀಗ ಮನ್ದೀಪ್ ವರ್ಮಾ ಐದು ಎಕರೆ ಪ್ರದೇಶದಲ್ಲಿ ಕಿವಿ ಹಣ್ಣನ್ನು ಬೆಳೆಯುತ್ತಿದ್ದಾರೆ. ಆಲಿಸನ್ ಮತ್ತು ಹೇವಾರ್ಡ್ ಎಂಬ ಎರಡು ಬಗೆಯ ಕಿವಿ ಹಣ್ಣನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆ. ಐದು ಎಕರೆಯಲ್ಲಿ 700ಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ. ಪ್ರತಿ ವರ್ಷ 7ರಿಂದ 8 ಟನ್ ಇಳುವರಿ ಪಡೆಯುತ್ತಿದ್ದಾರೆ. ಅಲ್ಲದೆ ಸೇಬನ್ನೂ ಬೆಳೆದಿದ್ದು, ಉತ್ತಮ ಇಳುವರಿ ದೊರೆಯುತ್ತಿದೆ. ಇದರಿಂದ ವಾರ್ಷಿಕವಾಗಿ ಒಟ್ಟು 40 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಗಿಡಗಳ ನಿರ್ವಹಣೆಗೆ 20 ಸಾವಿರ ರೂ ಖರ್ಚಾಗುತ್ತಿದೆ. ಸದ್ಯ ಕಿವಿ ಹಣ್ಣಿನ ಗಿಡಗಳು ಚಿಕ್ಕದಾಗಿದ್ದು, ಗಿಡಗಳು ಬೆಳೆದಂತೆ ಇಳುವರಿ ಹೆಚ್ಚಾಗುತ್ತದೆ. ಈ ಮೂಲಕ ವಾರ್ಷಿಕವಾಗಿ 40 ಟನ್ ಇಳುವರಿ ಪಡೆಯುವ ನಿರೀಕ್ಷೆಯಲ್ಲಿ ಮನ್ದೀಪ್ ವರ್ಮಾ ಇದ್ದಾರೆ. ಇಂದು ಕೆಲವು ವಿದ್ಯಾವಂತರು ಕೃಷಿಯನ್ನು ಉತ್ತಮ ವೃತ್ತಿ ಎಂದು ಪರಿಗಣಿಸುವುದಿಲ್ಲ. ತಂತ್ರಜ್ಞಾನ, ಪರಿಣಿತರ ಸಲಹೆ ಮುಂತಾದವುಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದರೆ ಎಲ್ಲರೂ ಯಶಸ್ಸು ಕಾಣಬಹುದು ಎಂಬುದು ಮಂದೀಪ್ ಮಾತು.
![solan-kiwi-cultivation-engineer-farmer-mandeep-verma-in-solan-natural-farming-of-kiwi-in-solan](https://etvbharatimages.akamaized.net/etvbharat/prod-images/05-10-2023/19688362_thu22.jpg)
ಮಂದೀಪ್ ಕಿವಿ ಬೇಸಾಯ ಕೈಗೊಳ್ಳಲು ಇತರ ರೈತರಿಗೂ ಉತ್ತೇಜನ ನೀಡುತ್ತಿದ್ದಾರೆ. ಅಲ್ಲದೆ ತಮ್ಮದೇ ನರ್ಸರಿಯಿಂದಲೇ ಜನರಿಗೆ ಸಸಿಗಳನ್ನು ಒದಗಿಸುತ್ತಿದ್ದಾರೆ. ಕೃಷಿಗೆ ಸಲಹೆಗಳನ್ನೂ ನೀಡುತ್ತಿದ್ದಾರೆ. ನಾವು ಬೆಳೆಯುವ ಬೆಳೆ ರಾಸಾಯನಿಕ ಮುಕ್ತವಾಗಿದ್ದರೆ ಗ್ರಾಹಕರಿಗೆ ಮತ್ತು ತೋಟಗಾರರಿಗೆ ಲಾಭದಾಯಕ ಎನ್ನುವುದು ಮಂದೀಪ್ ಅಭಿಪ್ರಾಯ.
ವೆಬ್‌ಸೈಟ್ ಮೂಲಕ ಬ್ರ್ಯಾಂಡಿಂಗ್, ಮಾರ್ಕೇಟಿಂಗ್: ಮನ್ದೀಪ್ ತಮ್ಮ ಉತ್ಪನ್ನಗಳನ್ನು ಸ್ವಸ್ತಿಕ್ ಫಾರ್ಮ್ ಹೆಸರಲ್ಲಿ ಬ್ರ್ಯಾಂಡಿಂಗ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇವರ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ದೇಶಾದ್ಯಂತ ಬೇಡಿಕೆ ಇದೆ. https://swaastikfarms.com/ ಹೆಸರಿನ ವೆಬ್‌ಸೈಟ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿರುವ ಇವರು ತಮ್ಮ ತೋಟ ಮತ್ತು ಹಣ್ಣುಗಳ ಬಗ್ಗೆ ವಿವರವಾದ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: ಹಾವೇರಿ: ಸಾವಯವ ಕೃಷಿ ಯುವ ಸಲಹೆಗಾರನಿಗೆ ₹5 ಲಕ್ಷ ಮೌಲ್ಯದ ಕಾರು ಗಿಫ್ಟ್ ನೀಡಿದ ರೈತ