ಹಜಾರಿಬಾಗ್ (ಜಾರ್ಖಂಡ್): ಕೊರೊನಾ ಲಾಕ್ಡೌನ್ ಬಳಿಕ ನಮ್ಮ ದೇಶ ಮಾತ್ರವಲ್ಲ ಇಡೀ ವಿಶ್ವದಲ್ಲೇ ಅನೇಕ ಜನರು ಉದ್ಯೋಗ ಕಳೆದುಕೊಂಡು ಪರದಾಡುತ್ತಿದ್ದಾರೆ. ಚೆನ್ನಾಗಿ ಓದಿ ವಿದ್ಯೆ ಸಂಪಾದಿಸಿದ ಅದೆಷ್ಟೋ ಮಂದಿ ನಿರುದ್ಯೋಗಿ ಎಂಬ ಹಣೆಪಟ್ಟಿ ಹೊಂದಿರುವ ಈ ಕಾಲದಲ್ಲಿ ಇಲ್ಲೊಬ್ಬ ಯುವಕ ಪ್ರತಿಷ್ಠಿತ ಕಂಪನಿಯ ಕೆಲಸ ಬಿಟ್ಟು ಭೂ ತಾಯಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ.
ಜಾರ್ಖಂಡ್ ರಾಜ್ಯದ ಹಜಾರಿಬಾಗ್‌ನ ಅಮರನಾಥ ದಾಸ್ ಎಂಬವರು ಬಿಐಟಿ ಮೆಸ್ರಾದಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದವರು. 14 ವರ್ಷಗಳ ಕಾಲ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಆ ಬಳಿಕ ಇವರು ಮತ್ತೆ ಹಳ್ಳಿಗೆ ಮರಳಿದರು. ಸಾಯಿಲ್-ಲೆಸ್(SOIL LESS) ತಂತ್ರಜ್ಞಾನದ ಆಧಾರದ ಮೇಲೆ ಪಾಲಿಹೌಸ್ ನಿರ್ಮಿಸುವ ಮೂಲಕ ರೈತರಿಗೆ ಸಹಾಯ ಮಾಡಲು ನಿರ್ಧರಿಸಿದರು.
ಅಮರನಾಥ್ ಅವರು ಮಣ್ಣಿನ ಬದಲು ಕೋಕೋ ಪೀಟ್ ಅನ್ನು ಬಳಸಿದರು. ಇದರಿಂದಾಗಿ ಶೇ. 90ಕ್ಕೂ ಹೆಚ್ಚು ಬೀಜಗಳು ಮಣ್ಣಿಲ್ಲದೆಯೇ ಸಸ್ಯಗಳಾಗಿ ಪರಿವರ್ತನೆಗೊಳ್ಳಲು ಪ್ರಾರಂಭಿಸಿದವು. ಈ ತಂತ್ರಜ್ಞಾನದಿಂದಾಗಿ ಸಸ್ಯವು ವೈರಸ್ ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿ ಉಳಿದವು. ಇದು ರೈತರಿಗೆ ಉತ್ತಮ ಇಳುವರಿಯನ್ನು ನೀಡಲು ಸಹ ಪ್ರಯೋಜನಕಾರಿಯಾಗಿದೆ.
ಈ ಉಪಕ್ರಮದಿಂದ ಅಮರನಾಥ್ ಅವರು ಪ್ರತಿ ತಿಂಗಳು 75 ಸಾವಿರ ರೂ.ಗೆ ಆದಾಯ ಗಳಿಸುತ್ತಿದ್ದಾರೆ. ರೈತರು ಸಹ ಈ ತಂತ್ರದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಎಂಜಿನಿಯರ್ ಒಬ್ಬರು ತಮ್ಮ ಕೆಲಸವನ್ನು ತೊರೆದು, ಹೊಸ ತಂತ್ರಜ್ಞಾನದೊಂದಿಗೆ ರೈತರಿಗೆ ಸಹಾಯ ಮಾಡುತ್ತಿರುವುದು ಇಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಉದ್ಯೋಗ ಅರಸುತ್ತಾ ಅಲೆದಾಡುವ ಯುವಕರಿಗೆ ಅಮರನಾಥ್ ಸ್ಫೂರ್ತಿಯಾಗಿದ್ದಾರೆ. ಸರ್ಕಾರವೂ ಕೂಡ ಈ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಿದರೆ ದೇಶದ ಇತರ ರೈತರಿಗೆ ಸಹ ಅನುಕೂಲವಾಗುತ್ತದೆ ಎಂಬುದು ಇಲ್ಲಿನ ಸ್ಥಳೀಯರ ನಿರೀಕ್ಷೆ.