ಎನ್‌ಟಿಆರ್ (ಆಂಧ್ರಪ್ರದೇಶ): ಆನ್‌ಲೈನ್ ವಂಚನೆಗೊಳಗಾದ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಜಗ್ಗಯ್ಯಪೇಟೆ ಮಂಡಲದ ಚಿಲ್ಲಕಲ್ಲು ಎಂಬಲ್ಲಿ ನಡೆದಿದೆ.
ಎಸ್‌ಐ ಚಿನಬಾಬು ನೀಡಿರುವ ಮಾಹಿತಿ ಪ್ರಕಾರ, ಗುಂಟೂರು ಜಿಲ್ಲೆ ಮಂಗಳಗಿರಿ ಮಂಡಲ ನವುಲೂರಿನ ಶ್ವೇತಾ ಚೌಧರಿ (22) ಹೈದರಾಬಾದ್‌ನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು. ಮೂರು ತಿಂಗಳಿನಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಕಚೇರಿಗೆ ಬರುವಂತೆ ಸೂಚಿಸಿದ ಹಿನ್ನೆಲೆ ಭಾನುವಾರ ಮುಂಜಾನೆ ತನ್ನ ಸಂಬಂಧಿಕರೊಂದಿಗೆ ಕಾರಿನಲ್ಲಿ ಹೈದರಾಬಾದ್‌ಗೆ ಹೋಗಲು ತಯಾರಿ ನಡೆಸಿದ್ದರು.
ಶನಿವಾರ ಸಂಜೆ 5 ಗಂಟೆಗೆ ಸ್ಕೂಟಿಯಲ್ಲಿ ಹೊರಗೆ ಬಂದಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಅವರು ಚಿಲ್ಲಕಲ್ಲು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರ ತಾಯಿಗೆ ಸಂದೇಶ ರವಾನಿಸಿದ್ದರು. ಬಳಿಕ ಪೋಷಕರು ಚಿಲ್ಲಕಲ್ಲು ಪೊಲೀಸರಿಗೆ ದೂರು ನೀಡಿದ್ದರು. ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ರಸಾಯನಶಾಸ್ತ್ರಜ್ಞ ಕೊಲೆ ಪ್ರಕರಣ: ಕೊಲ್ಹೆ ಕಡೆಯಿಂದ ನಿತ್ಯ ಔಷಧ ಖರೀದಿಸುತ್ತಿದ್ದ ಒಬ್ಬ ಆರೋಪಿ
ಆತ್ಮಹತ್ಯೆಗೆ ಆನ್‌ಲೈನ್ ವಂಚನೆ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿಯೋರ್ವ ಆನ್‌ಲೈನ್‌ನಲ್ಲಿ ಸಂಪರ್ಕಿಸಿ, ನೀವು 1.2 ಲಕ್ಷ ರೂ.ವನ್ನು ಪಾವತಿಸಿದರೆ, ನಿಮಗೆ 7 ಲಕ್ಷ ರೂ. ಮರಳಿ ಸಿಗುತ್ತದೆ ಎಂದು ಹೇಳಿದ್ದನಂತೆ. ಬಳಿಕ ಯುವತಿ ಹಂತ ಹಂತವಾಗಿ 1.3 ಲಕ್ಷ ರೂ. ಹಣವನ್ನು ಕಟ್ಟಿದ್ದಾರೆ. ಇದಾದ ನಂತರ ಎರಡು ದಿನಗಳಿಂದ ಆ ವ್ಯಕ್ತಿ ಫೋನ್ ಎತ್ತದ ಹಿನ್ನೆಲೆ ಶ್ವೇತಾ ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್‌ಐ ತಿಳಿಸಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.