ನವದೆಹಲಿ: ಹೈದರಾಬಾದ್‌ನಲ್ಲಿ ಪ್ರಾರಂಭಿಸಲಾದ ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಪ್ರಾಯೋಗಿಕ ಚಾಲನೆಯನ್ನು ಈಗ ಇತರ ಒಂಬತ್ತು ನಗರಗಳಿಗೆ ವಿಸ್ತರಿಸಲಾಗಿದೆ. ಬೆಂಗಳೂರು, ಮುಂಬೈ, ಕೋಲ್ಕತಾ, ದೆಹಲಿ, ಚೆನ್ನೈ, ವಿಶಾಖಪಟ್ಟಣಂ, ಬಡ್ಡಿ(ಹಿಮಾಚಲ ಪ್ರದೇಶ), ಕೊಲ್ಹಾಪುರ ಮತ್ತು ಮಿರಿಯಾಲಗೂಡ (ತೆಲಂಗಾಣ)ದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ.
ಜನರು ಇನ್ನೂ ಕೋವಿನ್ ಪೋರ್ಟಲ್ ಮೂಲಕ ರಷ್ಯಾದ ಲಸಿಕೆಗಾಗಿ ನೋಂದಾಯಿಸಲು ಸಾಧ್ಯವಿಲ್ಲ. ಅದನ್ನು ವಾಣಿಜ್ಯಿಕವಾಗಿ ಪ್ರಾರಂಭಿಸಿದಾಗ ಮಾತ್ರ ಆ ಸೌಲಭ್ಯ ಲಭ್ಯವಿರುತ್ತದೆ ಎಂದು ಸ್ಥಳೀಯ ವಿತರಣಾ ಪಾಲುದಾರ ಡಾ.ರೆಡ್ಡೀಸ್ ಹೇಳಿಕೆಯಲ್ಲಿ ತಿಳಿಸಿದೆ. ಪ್ರಾಯೋಗಿಕ ಹಂತದ ಚಾಲನೆ ಅಂತಿಮ ಹಂತದಲ್ಲಿದ್ದು, ಎರಡೂ ಡೋಸ್ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಏಪ್ರಿಲ್‌ನಲ್ಲಿ ತುರ್ತು ಬಳಕೆಗಾಗಿ ಔಷಧ ನಿಯಂತ್ರಕದಿಂದ ಅನುಮತಿ ಪಡೆದ ಸ್ಪುಟ್ನಿಕ್ ವಿ ಗಾಗಿ ಪ್ರಾಯೋಗಿಕ ಕಾರ್ಯಕ್ರಮವನ್ನು ಮೇ 17 ರಂದು ಡಾ. ರೆಡ್ಡೀಸ್ ಲ್ಯಾಬ್ ಮತ್ತು ಅಪೊಲೊ ಆಸ್ಪತ್ರೆಗಳ ಸಹಯೋಗದೊಂದಿಗೆ ಪ್ರಾರಂಭಿಸಲಾಯಿತು. ಭಾರತದಲ್ಲಿ, ಲಸಿಕೆಯ ಮೊದಲ ಪ್ರಮಾಣಕ್ಕೆ ಹೈದರಾಬಾದ್‌ನಲ್ಲಿ ಮೇ 15 ರಂದು ಚಾಲನೆ ನೀಡಲಾಗಿತ್ತು.
ಲಸಿಕೆ ವಾಣಿಜ್ಯಿಕವಾಗಿ ಪ್ರಾರಂಭಿಸುವ ಮೊದಲು ನಗರಗಳಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಕೋವಿನ್ ಪೋರ್ಟಲ್ ಮತ್ತು ಇತರ ವ್ಯವಸ್ಥಾಪನಾ ಅಂಶಗಳನ್ನು ಪರೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ. ರಷ್ಯಾದ ಲಸಿಕೆ ಶೇಕಡಾ 91.6 ರಷ್ಟು ಹೆಚ್ಚಿನ ಪರಿಣಾಮಕಾರಿತ್ವವನ್ನು ಹೊಂದಿದೆ. ಕೇಂದ್ರದ ಬೆಲೆ ಪ್ರಕಾರ, ಆಸ್ಪತ್ರೆಯ ಶುಲ್ಕಗಳು ಮತ್ತು ತೆರಿಗೆ ಸೇರಿದಂತೆ ಇದರ ಬೆಲೆ ರೂ. 1,145 ಆಗಿರುತ್ತದೆ.