ಚೆನ್ನೈ(ತಮಿಳುನಾಡು): ವಿದೇಶಗಳಿಂದ ಡ್ರಗ್ಸ್ ಸಾಗಣೆಗೆ ಎಷ್ಟೇ ಕಡಿವಾಣ ಹಾಕಿದರೂ ಅದರ ಹರಿವು ಮಾತ್ರ ನಿಂತಿಲ್ಲ. ಉಗಾಂಡಾದಿಂದ ಮಹಿಳೆಯೊಬ್ಬಳು ರಹಸ್ಯವಾಗಿ ಸಾಗಿಸುತ್ತಿದ್ದ ಅಫೀಮನ್ನು ಪೊಲೀಸ್ ಶ್ವಾನ ಪತ್ತೆ ಹಚ್ಚಿದೆ. 5.35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ.
ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಉಗಾಂಡಾ ಮಹಿಳೆಯ ಬ್ಯಾಗೇಜ್ನಲ್ಲಿ ಡ್ರಗ್ಸ್ ಇರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಮಹಿಳೆಯನ್ನು ತಡೆದು ಪರಿಶೀಲಿಸಲಾಯಿತು. ಬಳಿಕ ಆಕೆಯ ಬ್ಯಾಗೇಜ್ಅನ್ನು ಮೂಸಿದ ಪೊಲೀಸ್ ಬೇಟೆ ನಾಯಿ, ಅದರಲ್ಲಿ ಅಫೀಮು ಇರುವುದನ್ನು ಪತ್ತೆ ಹಚ್ಚಿತು.
ಕಾಟನ್ ಬ್ಯಾಗೇಜ್ನಲ್ಲಿ ಒಟ್ಟಾರೆ 5.35 ಕೋಟಿ ರೂಪಾಯಿ ಮೌಲ್ಯದ 1542 ಗ್ರಾಂ ಮೆಥಾಕ್ವಾಲೊನ್ ಮತ್ತು 644 ಗ್ರಾಂ ಹೆರಾಯಿನ್ ಅನ್ನು ಜಪ್ತಿ ಮಾಡಿ, ಉಗಾಂಡಾ ಮಹಿಳೆಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.