ಅರಾರಿಯಾ (ಬಿಹಾರ) : ಮೇ 18 ರಂದು ಇಲ್ಲಿಯ ಛಾಪ್ರಾದ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟದಲ್ಲಿ ಹಲ್ಲಿ ಕಂಡು ಬಂದಿದ್ದು ಇದನ್ನು ಸೇವಿಸಿದ್ದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ಮಾಸುವ ಮುನ್ನವೆ ಜಿಲ್ಲೆಯಲ್ಲಿ ಮತ್ತೊಂದು ಘಟನೆ ವರದಿಯಾಗಿದೆ. ಇಲ್ಲಿಯ ಫರ್ಬಿಸ್‌ಗಂಜ್ ಉಪವಿಭಾಗ ಜೋಗ್ಬಾನಿಯದಲ್ಲಿನ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವು ಪತ್ತೆಯಾಗಿದ್ದು, ಇದನ್ನು ಸೇವಿಸಿ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ.
ಶನಿವಾರ (ಇಂದು) ಮಧ್ಯಾಹ್ನ ಮಕ್ಕಳಿಗೆ ಊಟಕ್ಕೆ ಎಂದು ಖಿಚಡಿ ನೀಡಲಾಗಿತ್ತು. ಈ ವೇಳೆ ಊಟದ ತಟ್ಟೆಯಲ್ಲಿ ಹಾವಿನ ಮರಿ ಕಾಣಿಸಿಕೊಂಡಿದೆ. ಇದಕ್ಕೂ ಮುನ್ನ ಆಹಾರ ಸೇವಿಸಿದ ಮಕ್ಕಳಲ್ಲಿ ವಾಂತಿ, ಭೇದಿ ಕಾಣಸಿಕೊಂಡಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಕೂಡಲೇ ಫೋರ್ಬ್ಸ್‌ಗಂಜ್ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಜೋಗಬಾನಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಫೋರ್ಬ್ಸ್‌ಗಂಜ್ ಎಸ್‌ಡಿಒ ಮತ್ತು ಎಸ್‌ಡಿಪಿಒಗೂ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಘಟನೆ ಬಗ್ಗೆ ಮಾಹಿತಿ ಪಡೆದು ಅಸ್ವಸ್ಥ ಮಕ್ಕಳ ಆರೋಗ್ಯದ ಸ್ಥಿತಿ ಬಗ್ಗೆ ಗಮನಿಸಿದ್ದಾರೆ.
ಬಳಿಕ ಘಟನೆ ಬಗ್ಗೆ ಎಸ್‌ಡಿಒ ಸುರೇಂದ್ರ ಅವರು ಪ್ರತಿಕ್ರಿಯೆ ನೀಡಿ, "ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವಿನ ಮರಿ ಹೇಗೆ ಪತ್ತೆಯಾಗಿದೆ ಎಂಬುದು ಅಚ್ಚರಿಯ ವಿಷಯ. ಇದು ಹೇಗೆ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲು ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಹಾವು ಬಿದ್ದ ಆಹಾರ ಸೇವನೆಯಿಂದ ಸುಮಾರು ನೂರು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೇವಲ 25 ಮಕ್ಕಳು ಮಾತ್ರ ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ಫೋರ್ಬ್ಸ್‌ಗಂಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ. ಅಲ್ಲದೇ ಉನ್ನತ ಮಟ್ಟದ ತನಿಖೆ ನಡೆಸಿ ಘಟನೆಯಲ್ಲಿ ಯಾರೇ ಹೊಣೆಗಾರರಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಸುರೇಂದ್ರ ತಿಳಿಸಿದ್ದಾರೆ.
ಬಿಸಿ ಊಟ ಸೇವಿಸಿ 100 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂಬ ಸುದ್ಧಿ ಹಬ್ಬುತ್ತಿದ್ದಂತೆ ಪಾಲಕರು, ಗ್ರಾಮಸ್ಥರು ಆಸ್ಪತ್ರೆ ಮತ್ತು ಶಾಲೆಗೆ ಧಾವಿಸಿದ್ದಾರೆ. ಈ ವೇಳೆ ಶಾಲೆ ಒಳಗಡೆ ಪ್ರವೇಶಿಸಲು ಪೋಷರು ಪ್ರಯತ್ನಿಸಿದ್ದು ಅವರನ್ನು ತಡೆಯಲಾಗಿತ್ತು. ಇದರಿಂದ ಶಾಲೆ ಮುಂಭಾಗದಲ್ಲಿ ನೂಕುನುಗ್ಗಲು ಉಂಟಾಗಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಶಾಲೆಯೊಳಗೆ ನುಗ್ಗಿದ ಪೋಷಕರು ಗಲಾಟೆ ಮಾಡಿ, ಮುಖ್ಯೋಪಾಧ್ಯಾಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಎಸ್‌ಡಿಒ ಸುರೇಂದ್ರ ಅವರು ಪೋಷಕರಿಗೆ ತಿಳಿ ಹೇಳಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ಭರವಸೆ ನೀಡಿದ್ದಾರೆ. ಬಳಿಕೆ ಪೋಷಕರು ಅಲ್ಲಿಂದ ತೆರಳಿದ್ದಾರೆ.
ಮಾಹಿತಿ ಪ್ರಕಾರ, ಶಾಲೆಯಲ್ಲಿ ಈ ಆಹಾರವನ್ನು ತಯಾರಿಸಲಾಗಿಲ್ಲ, ಬದಲಿಗೆ ಎನ್ಜಿಒಗಳು ಆಹಾರ ವಿತರಣೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಪಂಚಾಯಿತಿ ಮಾಜಿ ಮುಖ್ಯಾಧಿಕಾರಿ ಮುನ್ನಾಖಾನ್ ಮಾತನಾಡಿ, "ಇದರಲ್ಲಿ ಶಾಲೆಯ ಯಾವುದೇ ತಪ್ಪಿಲ್ಲ. ಗುತ್ತಿಗೆದಾರರೇ ಆಹಾರ ಪೂರೈಸುತ್ತಾರೆ. ಅದರಲ್ಲಿ ಹಾವಿನ ಮರಿ ಪತ್ತೆಯಾಗಿದೆ. ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಂದಿರುವ ಮಾಹಿತಿ ಪ್ರಕಾರ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಇಬ್ಬರು ಸಹೋದರಿಯರ ಜೊತೆ ಮದುವೆ ನಿಶ್ಚಯವಾಗಿದ್ದ ಸಹೋದರ ಸಜೀವ ದಹನ: ಕಾರಣ ನಿಗೂಢ