ಗೋಪಾಲ್ಗಂಜ್(ಬಿಹಾರ): ಹಾವು ಕಚ್ಚಿದರೆ ಮನುಷ್ಯ ಸಾಯುವುದು ಸಹಜ. ಆದರೆ ಬಿಹಾರದಲ್ಲಿ ಅದು ಉಲ್ಟಾ ಆಗಿದೆ. ಬಾಲಕನಿಗೆ ನಾಗರಹಾವೊಂದು ಕಚ್ಚಿದೆ. ವಿಚಿತ್ರ ಎಂಬಂತೆ ಕಚ್ಚಿದ ಮರುಕ್ಷಣವೇ ಹಾವು ಸಾವನ್ನಪ್ಪಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಗುಣಮುಖನಾಗಿದ್ದಾನೆ.
ಬಿಹಾರದ ಗೋಪಾಲ್ಗಂಜ್ ತಾಲೂಕಿನ ಖಜೂರಿ ಪೂರ್ವ ತೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ ಹಾವು ಕಚ್ಚಿದೆ. ಬಳಿಕ ಅದು ನಿಮಿಷದಲ್ಲಿಯೇ ಸಾವನ್ನಪ್ಪಿದೆ. ಹಾವು ಕಚ್ಚಿದ ಬಗ್ಗೆ 4 ವರ್ಷದ ಬಾಲಕ ಕುಟುಂಬಸ್ಥರಿಗೆ ತಿಳಿಸಿದ್ದಾನೆ. ಈ ವೇಳೆ ಹೊರಬಂದು ನೋಡಿದಾಗ ಹಾವು ಮನೆಮುಂದೆಯೇ ಪ್ರಾಣತೆತ್ತು ಬಿದ್ದಿರುವುದು ಕಂಡು ಬಂದಿದೆ.
ವಿಚಿತ್ರ ಘಟನೆ ತಿಳಿಯುತ್ತಿದ್ದಂತೆ ಜನರು ಸತ್ತ ಹಾವನ್ನು ನೋಡಲು ಜಮಾಯಿಸಿದರು. ಬಾಲಕನಿಗೆ ಕಚ್ಚಿದ ಹಾವೇ ಸತ್ತಿದ್ದನ್ನು ಜನರು ನಂಬದಂತಾದರು. ಬಾಲಕನ ಕುಟುಂಬಸ್ಥರು ಹಾವನ್ನು ನಾವು ಸಾಯಿಸಿಲ್ಲ ಎಂದು ಹೇಳಿದ್ದಾರೆ. ಆದರೆ, ಈ ವಿಚಿತ್ರ ಸಂಗತಿ ಮಾತ್ರ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ 600ಕ್ಕೂ ಹೆಚ್ಚು ನಿಷ್ಕ್ರಿಯ ಮೊಬೈಲ್ ಟವರ್ ಕಳವು