ನವದೆಹಲಿ: ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ)ಯ ಅಖಿಲ ಭಾರತ ಕಾರ್ ರ‍್ಯಾಲಿ 'ಸುದರ್ಶನ್ ಭಾರತ್ ಪರಿಕ್ರಮ' ಯಾತ್ರೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ವಾಗತಿಸಿದರು. 29 ದಿನಗಳ ಸುದೀರ್ಘ ರ‍್ಯಾಲಿ 7,500 ಕಿ.ಮೀ ಕ್ರಮಿಸಿ ಇಂದು ದೆಹಲಿಗೆ ಆಗಮಿಸಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 2 ರಂದು ಕೆಂಪುಕೋಟೆ ಬಳಿ ರ‍್ಯಾಲಿಗೆ ಚಾಲನೆ ನೀಡಿದ್ದರು.
ಸ್ವಾತಂತ್ರ್ಯದ 75ನೇ ವರ್ಷದ ಅಂಗವಾಗಿ ಸ್ವಾತಂತ್ರ್ಯ ಚಳುವಳಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ವಿವಿಧ ಐತಿಹಾಸಿಕ ಸ್ಥಳಗಳ ಮೂಲಕ 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಭಾರತದಾದ್ಯಂತ ಆಯೋಜಿಸಲಾಗಿದೆ.
ಎನ್‌ಎಸ್‌ಜಿಯ ಕಾರ್ ರ‍್ಯಾಲಿಯು 12 ರಾಜ್ಯಗಳ 18 ನಗರಗಳ ಮೂಲಕ ಸಾಗಿ ದೆಹಲಿಗೆ ವಾಪಸ್ ಆಗಿದೆ. ಈ ಅವಧಿಯಲ್ಲಿ ಐತಿಹಾಸಿಕ ಸ್ಥಳಗಳಾದ ಕಾಕೋರಿ ಸ್ಮಾರಕ (ಲಖನೌ), ಭಾರತ್ ಮಾತಾ ಮಂದಿರ (ವಾರಣಾಸಿ), ನೇತಾಜಿ ಭವನ ಬ್ಯಾರಕ್‌ಪೋರ್ (ಕೋಲ್ಕತ್ತಾ), ಸ್ವರಾಜ್ ಆಶ್ರಮ (ಭುವನೇಶ್ವರ), ತಿಲಕ್ ಘಾಟ್ (ಚೆನ್ನೈ), ಫ್ರೀಡಂ ಪಾರ್ಕ್ ( ಬೆಂಗಳೂರು), ಮಣಿ ಭವನ ಮತ್ತು ಆಗಸ್ಟ್ ಕ್ರಾಂತಿ ಮೈದಾನ (ಮುಂಬೈ) ಹಾಗೂ ಸಬರಮತಿ ಆಶ್ರಮ (ಅಹಮದಾಬಾದ್). ಒಟ್ಟು 12 ಎನ್‌ಎಸ್‌ಜಿ ಅಧಿಕಾರಿಗಳು ಮತ್ತು 35 ಕಮಾಂಡೋಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ.