ಭಾರತವು ಸಾಲದ ಬಿಕ್ಕಟ್ಟನ್ನು ಎದುರುಗಾಣುತ್ತಿದೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇತ್ತೀಚೆಗೆ ಎಚ್ಚರಿಸಿದ್ದಾರೆ. ಭಾರತದ ಆರ್ಥಿಕ ಸುಧಾರಣೆಗಳಿಗೆ ಮುನ್ನುಡಿ ಬರೆದಿದ್ದ ಇವರು ನೀಡಿದ ಹೇಳಿಕೆಗಳು ಹೆಚ್ಚು ಪ್ರಸ್ತುತವಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಆರ್ಥಿಕ ಬಿಕ್ಕಟ್ಟಿನ ಪ್ರಭಾವದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂಬ ಅವರ ಎಚ್ಚರಿಕೆಯನ್ನು ಕಡೆಗಣಿಸಲಾಗದು. ಕೋವಿಡ್-19 ಸಾಂಕ್ರಾಮಿಕ ರೋಗ ಆಗಮನಕ್ಕೂ ಮುಂಚೆಯೇ ತೀವ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದ ಲಘು, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ ಮೈಕ್ರೊ, ಸ್ಮಾಲ್, ಮೀಡಿಯಂ ಎಂಟರ್ಪ್ರೈಸಸ್) ತೀರಾ ಅನಿವಾರ್ಯ ಸಂದರ್ಭ ಎನಿಸಿದ ಲಾಕ್ ಡೌನ್ ಹೇರಿಕೆ ಸಮಯದಲ್ಲಿ ಮಾರಣಾಂತಿಕ ಹೊಡೆತವನ್ನು ಅನುಭವಿಸಿದವು.
ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಿಕ್ಕೆ ಎಂಎಸ್ಎಂಇಗಳು ಪ್ರವಾಹದ ವಿರುದ್ಧ ಈಜುತ್ತಿವೆ ಎಂಬುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆಯೇ ದೃಢಪಡಿಸಿತ್ತು. ಪರಿಸ್ಥಿತಿ ಹೀಗಿರುವಾಗ, ದಿಢೀರನೇ ಬಂದೆರಗಿದ ಸಾಂಕ್ರಾಮಿಕ ರೋಗದ ಕಾಲದಲ್ಲಿಯೂ ಎಂಎಸ್ಎಂಇಗಳಿಗೆ ಯಾವುದೇ ಬೆಂಬಲ ದೊರೆಯಲಿಲ್ಲ. ಕೇಂದ್ರ ಪ್ಯಾಕೇಜ್ ಸಣ್ಣ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುವಲ್ಲಿ ವಿಫಲವಾಗಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಆಗಿರುವ ಮೂಡಿಸ್ ಎಂದು ಷರಾ ಬರೆಯಿತು. ಎಂಎಸ್ಎಂಇಗಳು ಎದುರಿಸುತ್ತಿರುವ ಸಂಕಟವನ್ನು ಈ ಹೇಳಿಕೆ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಸಣ್ಣ ಕೈಗಾರಿಕೆಗಳ ಪುನಃಶ್ಚೇತನಕ್ಕೆ 45 ಲಕ್ಷ ಕೋಟಿ ರೂ. ಅವಶ್ಯವಿದೆ. ಅದಾಗ್ಯೂ, ಅಗತ್ಯವಾದ ಸಹಾಯದ ಶೇಕಡಾ 18 ಕ್ಕಿಂತ ಕಡಿಮೆ ಸಹಾಯವನ್ನು ಮಾತ್ರ ನೀಡಲು ಮಾತ್ರ ಬ್ಯಾಂಕುಗಳಿಗೆ ಸಾಧ್ಯ. ಸಣ್ಣ ಕೈಗಾರಿಕೆಗಳು ತಮ್ಮ ಸೀಮಿತ ಹೂಡಿಕೆಯ ಹೊರತಾಗಿಯೂ ದೇಶದ ಆರ್ಥಿಕ ಪ್ರಗತಿಗೆ 11 ಕೋಟಿ ಉದ್ಯೋಗಗಳನ್ನು ಒದಗಿಸುತ್ತಿವೆ. ಅಷ್ಟೇ ಅಲ್ಲ, ವಿವಿಧ ರೀತಿಯ ಸರಕುಗಳನ್ನು ತಯಾರಿಸುವ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿವೆ. ಹೀಗಿದ್ದರೂ ಈ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನ ಸಮಯದಲ್ಲಿ, ಈ ಕೈಗಾರಿಕೆಗಳನ್ನು ಕೇವಲ ಮನವಿ ಸಲ್ಲಿಸಲು ಮತ್ತು ಹತಾಶ ಕಣ್ಣುಗಳಿಂದ ಸಹಾಯಕ್ಕಾಗಿ ಯಾಚಿಸುವಂತೆ ಮಾಡಲಾಗಿದೆ. ಈ ವಲಯಕ್ಕೆ ಸಹಾಯ ಮಾಡುವುದರಲ್ಲಿ ರಾಷ್ಟ್ರೀಯ ಹಿತಾಸಕ್ತಿಗ ಅಡಗಿದೆ ಎಂಬ ತಿಳಿವಳಿಕೆಯೊಂದಿಗೆ ಈ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸಂಬಂಧಪಟ್ಟ ಸಚಿವಾಲಯದ ಪ್ರಕಾರ, ದೇಶದಲ್ಲಿ 6.3 ಕೋಟಿ ಸಣ್ಣ ಕೈಗಾರಿಕೆಗಳಿದ್ದು, ಅವು ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ ಶೇಕಡಾ 30ರಷ್ಟು ಕೊಡುಗೆ ನೀಡುತ್ತಿವೆ. ನೆರೆಯ ಚೀನಾದಲ್ಲಿ, ಸುಮಾರು 3.8 ಕೋಟಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿದ್ದು, ಅವು ಆ ದೇಶದ ಜಿಡಿಪಿಯ ಶೇಕಡಾ 60ರಷ್ಟು ಕೊಡುಗೆ ನೀಡುತ್ತವೆ. ಚೀನಾದಲ್ಲಿ ಅಂದಾಜು ಶೇಕಡಾ 80ರಷ್ಟು ಉದ್ಯೋಗಾವಕಾಶಗಳು ಈ ವಲಯದಿಂದಲೇ ಉತ್ಪತ್ತಿಯಾಗುತ್ತವೆ. ಅಂದಾಜಿನ ಪ್ರಕಾರ, ಚೀನಾದಲ್ಲಿ ಪ್ರತಿ ದಿನ ಸುಮಾರು 16,000ದಿಂದ 18,000 ಹೊಸ ಕಂಪನಿಗಳು ಅಸ್ತಿತ್ವಕ್ಕೆ ಬರುತ್ತಿವೆ.
ಓದಿ : ವೇರೆಬಲ್ಸ್ ಮಾರಾಟ ಶೇ 144 ವೃದ್ಧಿ: ಮೂರಂಕಿಯಲ್ಲಿ ಅತಿಹೆಚ್ಚು ಜಿಗಿದ ಏಕೈಕ ರಾಷ್ಟ್ರ ಭಾರತ!
ಅಂತಹ ಪ್ರೋತ್ಸಾಹಕರ ವಾತಾವರಣದ ಕೊರತೆಯಿಂದಾಗಿ, ಭಾರತದ ಸಣ್ಣ ಕೈಗಾರಿಕೆಗಳು ಬದುಕುಳಿಯುವುದಕ್ಕಾಗಿ ನಿರಂತರ ಪ್ರಯೋಗಗಳು ಮತ್ತು ತೊಂದರೆಗಳನ್ನು ಎದುರಿಸುವ ಪರಿಸ್ಥಿತಿಗೆ ಸಿಲುಕಿವೆ.
ಕೇವಲ ಚೀನಾ ಮಾತ್ರವಲ್ಲ, ಅಮೆರಿಕ, ಜಪಾನ್ ಮತ್ತು ಸಿಂಗಾಪುರದಂತಹ ದೇಶಗಳು ತಮ್ಮ ಆರ್ಥಿಕತೆಗಳಿಗೆ ಜೀವ ನೀಡುವ ಈ ಕ್ಷೇತ್ರಗಳ ಮಹತ್ವವನ್ನು ಅರ್ಥ ಮಾಡಿಕೊಂಡಿರುವುದರಿಂದ ಅವುಗಳಿಗೆ ತಾಂತ್ರಿಕ ಮತ್ತು ಇತರ ಬೆಂಬಲವನ್ನು ನೀಡುವ ಮೂಲಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಪ್ರೋತ್ಸಾಹಿಸುತ್ತಿವೆ. ಕೆನಡಾ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ನಂತಹ ದೇಶಗಳು ಸಹ ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗುವ ನೀತಿಗಳನ್ನು ಜಾರಿಗೊಳಿಸುತ್ತಿವೆ. ಜರ್ಮನಿಯಲ್ಲಿ ಉದ್ಯೋಗ ಪರಿಸ್ಥಿತಿ ಉತ್ತಮವಾಗಿರುವುದರ ಹಿಂದಿನ ಕಾರಣವೆಂದರೆ ಮಿಟಲ್ ಸ್ಟ್ಯಾಂಡ್ ಎಂದು ಕರೆಯಲ್ಪಡುವ ಅದರ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆ ದೇಶವು ನೀಡುತ್ತಿರುವ ಪ್ರೋತ್ಸಾಹ.
ಹಲವಾರು ಸಮಿತಿಗಳ ವರದಿಗಳ ಶಿಫಾರಸುಗಳ ಹೊರತಾಗಿಯೂ, ಈ ವಲಯಕ್ಕೆ ನಮ್ಮಲ್ಲಿ ನಿಯಮಿತ ಹಾಗೂ ಸಾಂಸ್ಥಿಕ ಬೆಂಬಲವಿಲ್ಲ. ಸಾಂಕ್ರಾಮಿಕದಿಂದ ಪೀಡಿತವಾಗಿರುವ ಸಣ್ಣ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುವ ವಿಧಾನಗಳನ್ನು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಈಗಾಗಲೇ ಸೂಚಿಸಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳಿಂದ ಮೂರು ವರ್ಷಗಳ ವಿನಾಯಿತಿ ನೀಡಬೇಕೆಂದು ಅದು ಕೋರಿದೆ. ಈ ವಲಯಕ್ಕೆ ‘59 ನಿಮಿಷಗಳಲ್ಲಿʼ ಸಾಲ ಮಂಜೂರಾಗುತ್ತಿದೆಯಾದರೂ, ಸಾಲದ ಮೊತ್ತ ಬಿಡುಗಡೆ ಮಾಡಲು ಬಹಳ ಸಮಯ ತೆಗೆದುಕೊಳ್ಳಲಾಗುತ್ತಿದೆ. ಆರ್ಥಿಕ ಪ್ರಚೋದನೆ ಕುರಿತ ನಮ್ಮ ಘೋಷಣೆಗಳಲ್ಲಿ ಪ್ರಾಮಾಣಿಕತೆ ಇಲ್ಲ. ಅರ್ಹತೆಗೆ ಅನುಗುಣವಾಗಿ ಹಣಕಾಸಿನ ನೆರವು, ಕಾರ್ಮಿಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಮಾರುಕಟ್ಟೆಯೊಂದಿಗಿನ ಸಂಪರ್ಕ ಈ ನಿರ್ಣಾಯಕ ಪರಿಸ್ಥಿತಿಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಒದಗಿಸಬೇಕಾದ ಅವಶ್ಯಕತೆಗಳಾಗಿವೆ.