ಗ್ವಾಲಿಯರ್(ಮಧ್ಯಪ್ರದೇಶ): ದೇಶದಲ್ಲಿ ಅನಿಷ್ಟ ಬಾಲ್ಯವಿವಾಹ ಪದ್ಧತಿ ನಿಷೇಧವಾಗಿದೆ. ಇದರ ಮಧ್ಯೆ ಕೂಡ ಕೆಲವೊಂದು ಪ್ರದೇಶಗಳಲ್ಲಿ ಇಂತಹ ಪ್ರಕರಣ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿರುತ್ತವೆ. ಸದ್ಯ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಇಂತಹದೊಂದು ಪ್ರಕರಣ ನಡೆದಿದೆ.
21 ವರ್ಷದ ಯುವಕನೊಂದಿಗೆ 11ರ ಬಾಲೆ ಮದುವೆ ಮಾಡಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಈ ಮದುವೆಯನ್ನ ಬಾಲಕಿಯ ತಾಯಿ ಮತ್ತು ಮಲತಂದೆ ಬಲವಂತವಾಗಿ ಮಾಡಿಸಿದ್ದಾರೆ ಎನ್ನಲಾಗ್ತಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಬಾಲಕಿಯ ಸಹೋದರನ ದೂರಿನ ಮೇರೆಗೆ ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ.
ಬಂಧಿತರನ್ನ ಬಾಲಕಿಯ ತಾಯಿ, ಮಲತಂದೆ, ಮಧ್ಯವರ್ತಿ ಹಾಗೂ ಮದುವೆ ಮಾಡಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆಯ ಮೇಲೆ ಲೈಂಗಿಕ ಕಿರುಕುಳ ಸಹ ನಡೆದಿದೆ. ಹೀಗಾಗಿ ಮದುವೆಯಾದ ಯುವಕನ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿರಿ: ಚಂದ್ರು ಕೊಲೆ ಕೇಸ್ - ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ: ಕೊಲೆಯಾಗಿದ್ದು ಇದೇ ವಿಚಾರಕ್ಕಂತೆ!
ಗ್ವಾಲಿಯರ್ನ ಚಿನೋರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ಕುಟುಂಬ ಬುಡಕಟ್ಟು ಸಮುದಾಯಕ್ಕೆ ಸೇರಿದೆ ಎಂದು ಹೇಳಲಾಗ್ತಿದೆ. ಬಾಲಕಿ ಇಚ್ಛೆಗೆ ವಿರುದ್ಧವಾಗಿ ಈ ಮದುವೆ ನಡೆದಿದ್ದು, ಹೀಗಾಗಿ ಇತರ ಆರೋಪಿಗಳ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.