ಕಾನ್ಪುರ (ಉತ್ತರ ಪ್ರದೇಶ) : ಮತ್ತೆ 6 ಝಿಕಾ ವೈರಸ್ ಪ್ರಕರಣಗಳು ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತ್ತೆಯಾಗಿದ್ದು, ರಾಜ್ಯ ಅಥವಾ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಅಕ್ಟೋಬರ್ 23ರಂದು ಕಾನ್ಪುರದಲ್ಲಿ ಐಎಎಫ್ ಅಧಿಕಾರಿಗೆ ಝಿಕಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದು ಉತ್ತರ ಪ್ರದೇಶದ ಮೊದಲ ಕೇಸ್ ಆಗಿತ್ತು. ಆ ಬಳಿಕ ಮೂರು ಪ್ರಕರಣ ವರದಿಯಾಗಿತ್ತು.
ನಿನ್ನೆ ಸಂಜೆ ಕಾನ್ಪುರದ ಚಕೇರಿ ಪ್ರದೇಶದಲ್ಲಿ ವಾಸವಾಗಿರುವ ನಾಲ್ವರು ಮಹಿಳೆ ಮತ್ತು ಇಬ್ಬರು ಪುರುಷರ ವರದಿ ಪಾಸಿಟಿವ್ ಬಂದಿದೆ. ನಾಲ್ವರು ಮಹಿಳೆಯರಲ್ಲಿ ಒಬ್ಬರು ಗರ್ಭಿಣಿಯಾಗಿದ್ದಾರೆ.
ಎಲ್ಲಾ ಆರು ಸೋಂಕಿತರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಸೋಂಕಿತರ ಮನೆಗಳ ಸುತ್ತ ಸುಮಾರು 400 ಮನೆಗಳನ್ನು ಕಂಟೈನ್ಮೆಂಟ್ ಪ್ರದೇಶವನ್ನಾಗಿ ಘೋಷಿಸಲಾಗಿದೆ.
ಚಕೇರಿ ಪ್ರದೇಶದಲ್ಲಿ ಜ್ವರದಿಂದ ಬಳಲುತ್ತಿರುವ 645 ಶಂಕಿತರ ಹಾಗೂ ಗರ್ಭಿಣಿಯರ ರಕ್ತದ ಮಾದರಿಯನ್ನು ವೈದ್ಯಕೀಯ ತಂಡ ಸಂಗ್ರಹಿಸಿದೆ. ಇವರ ಮಾದರಿಗಳನ್ನು ಲಖನೌನ ಕೆಜಿಎಂಯು ಲ್ಯಾಬ್ ಮತ್ತು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಗೆ ಕಳುಹಿಸಲಾಗಿದೆ ಎಂದು ಉತ್ತರ ಪ್ರದೇಶದ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕ ಜಿಎಸ್ ಬಾಜಪೈ ತಿಳಿಸಿದ್ದಾರೆ.
ಇದನ್ನೂ ಓದಿ: ಝಿಕಾ ವೈರಸ್ ಭಯಬೇಡ, ಮುನ್ನೆಚ್ಚರಿಕೆ ಅಗತ್ಯ.. ಇಲ್ಲಿವೆ ಕೆಲ ಉಪಯುಕ್ತ ಸಲಹೆಗಳು..
ಝಿಕಾ ವೈರಸ್
ಝಿಕಾ ವೈರಸ್, ಇದು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಗಳ ಮೂಲಕ ಹರಡುವ ವೈರಸ್ ಆಗಿದೆ. ಈ ವೈರಸ್ ದೇಹಕ್ಕೆ ಹೊಕ್ಕಿದರೂ ಕೆಲವರಲ್ಲಿ ರೋಗ ಲಕ್ಷಣಗಳು ಕಂಡು ಬರುವುದಿಲ್ಲ. ಶೇ.80ರಷ್ಟು ರೋಗಿಗಳಿಗೆ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ.
ಒಂದು ವೇಳೆ ಕಂಡು ಬಂದರೆ ಜ್ವರ, ಮೈ-ಕೈ ನೋವು ಮತ್ತು ಕಣ್ಣು ಕೆಂಪಾಗುವುದು ಇಂತಹ ಲಕ್ಷಣಗಳು ಕಂಡು ಬರುತ್ತದೆ. ಝಿಕಾ ವೈರಸ್ ಅಪಾಯ ಹೆಚ್ಚು ಗರ್ಭಿಣಿಯರ ಮೇಲೆ ಬೀರಲಿದೆ.
ಮೊದಲು ಪತ್ತೆಯಾದದ್ದು ಎಲ್ಲಿ?
2019ರಲ್ಲಿ ಈ ವೈರಸ್ ಮೊದಲು ಬ್ರೆಜಿಲ್‌ನಲ್ಲಿ ಗರ್ಭಾವಸ್ಥೆಯಲ್ಲಿದ್ದ ಮಹಿಳೆಯಲ್ಲಿ ಕಂಡು ಬಂದಿತ್ತು. ಭಾರತದಲ್ಲಿ ಮೊದಲು ಕಂಡು ಬಂದದ್ದು ಕೇರಳದಲ್ಲಿ. 2021ರ ಜುಲೈ 8ರಂದು ಗರ್ಭಿಣಿಯೊಬ್ಬರಿಗೆ ಪಾಸಿಟಿವ್ ಆಗಿತ್ತು. ಆಗಸ್ಟ್‌ನಲ್ಲಿ ಪುಣೆಯ 50 ವರ್ಷದ ಮಹಿಳೆಯೊಬ್ಬರು ಸೋಂಕಿಗೆ ತುತ್ತಾಗಿದ್ದರು.
ಇದು ಮಹಾರಾಷ್ಟ್ರದ ಮೊದಲ ಝಿಕಾ ವೈರಸ್ ಪ್ರಕರಣ ಆಗಿತ್ತು. ಕೇರಳದಲ್ಲಿ ಈವರೆಗೆ ಒಟ್ಟು 60ಕ್ಕೂ ಹೆಚ್ಚು ಝಿಕಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.