ಹೈದರಾಬಾದ್(ತೆಲಂಗಾಣ): ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ದುರ್ಮರಣಕ್ಕೀಡಾಗಿದ್ದು, ಉಳಿದಂತೆ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಹೈದರಾಬಾದ್ನ ಮಲಕ್ಪೇಟ್ ಮತ್ತು ಚಾದರ್ಘಾಟ್ನ ನಿವಾಸಿಗಳು ಎಂದು ಗುರುತಿಸಲಾಗಿದೆ.
ಟೊಯೊಟಾ ಕ್ವಾಲಿಸ್ನಲ್ಲಿ ಎರಡು ಕುಟುಂಬದ 12 ಸದಸ್ಯರು ಮಹಾರಾಷ್ಟ್ರದ ನಾಂದೇಡ್ನಲ್ಲಿರುವ ಹಜರತ್ ಶಾ ಕಾಮಿಲ್ ದಾದ್ ದರ್ಗಾಗೆ ಪ್ರಯಾಣಿಸುತ್ತಿದ್ದರು. ಈ ವೇಳೆ, ನಿಯಂತ್ರಣ ಕಳೆದುಕೊಂಡಿರುವ ಕ್ವಾಲಿಸ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದ್ದು, ಚಾಲಕ ಸಹ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ. ಗಾಯಗೊಂಡವರನ್ನ ಬಾನ್ಸವಾಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೃತದೇಹಗಳನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಅಪಘಾತಕ್ಕೀಡಾಗಿರುವ ಸಂಬಂಧಿಕರಿಗಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಂದೇಡ್-ಅಕೋಲಾ ರಾಷ್ಟ್ರೀಯ ಹೆದ್ದಾರಿ 161ರಲ್ಲಿ ವೇಗವಾಗಿ ಬಂದ ಟೊಯೊಟಾ ಕ್ವಾಲಿಸ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕಾರಿನ ರಭಸಕ್ಕೆ ಅದರ ಅರ್ಧ ಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಸ್ಥಳಕ್ಕೆ ಬಾನ್ಸವಾಡ ಡಿಎಸ್ಪಿ ಜೈಪಾಲ್ ರೆಡ್ಡಿ ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.