ಕಾಂಚಿಪುರಂ (ತಮಿಳುನಾಡು): ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಮಹಿಳೆಯರು ಸೇರಿದಂತೆ ಒಂಭತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ತಕ್ಷಣಾ ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ: ಹೊಸ ವರ್ಷದಂದೇ ಎರಡು ಕಾರ್ಖಾನೆಗಳಲ್ಲಿ ಅಗ್ನಿ ದುರಂತ: ಮಹಿಳೆಯರು ಸೇರಿ ಐವರ ದುರ್ಮರಣ
ಇಲ್ಲಿನ ಕುರುವಿಮಲೈ ಗ್ರಾಮದಲ್ಲಿ ಬುಧವಾರ ಈ ದುರಂತ ಜರುಗಿದೆ. ಏಕಾಏಕಿ ಸದ್ದಿನೊಂದಿಗೆ ಭೀಕರ ಸ್ಫೋಟ ಸಂಭವಿಸಿದೆ. ಪರಿಣಾಮ ಈ ಘಟನೆಯಲ್ಲಿ ಸ್ಥಳದಲ್ಲೇ ನಾಲ್ವರು ಮಂದಿ ಸಾವನ್ನಪ್ಪಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇವರನ್ನು ಕಾಂಚಿಪುರಂ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಬಗ್ಗೆ ಕಾಂಚಿಪುರಂ ಜಿಲ್ಲಾಧಿಕಾರಿ ಎಂ.ಆರತಿ ಪ್ರತಿಕ್ರಿಯಿಸಿದ್ದು, ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇದುವರೆಗೆ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯಕ್ಕೆ ಈ ಸ್ಫೋಟಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ನರೇಂದ್ರನ್ ಫೈರ್ ವರ್ಕ್ಸ್ ಎಂಬ ಪಟಾಕಿ ತಯಾರಿಕಾ ಘಟಕವು 20 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದೆ. ವಿವಿಧ ರೀತಿಯ ಪಟಾಕಿಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತಿತ್ತು. ಇಂದು ಕೂಡ ಎಂದಿನಂತೆ ಈ ಗೋದಾಮಿನಲ್ಲಿ 30ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದರಲ್ಲಿ ಭೂಪತಿ (57), ಮುರುಗನ್ (40), ಶಶಿಕಲಾ (35), ದೇವಿ (32), ಸುದರ್ಶನ್ (31), ವಿದ್ಯಾ (30) ಸೇರಿ ಒಂಭತ್ತು ಜನರು ಮೃತಪಟ್ಟಿದ್ದಾರೆ.
ಪರಿಹಾರ ಘೋಷಿಸಿದ ಸಿಎಂ: ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪರಿಹಾರ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದ್ದಾರೆ.
ಈ ಹಿಂದಿನ ಪಟಾಕಿ ದುರ್ಘಟನೆಗಳು: ತಮಿಳುನಾಡಿನಲ್ಲಿ ಆಗಾಗ್ಗೆ ಪಟಾಕಿ ಗೋದಾಮು ಮತ್ತು ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಳ್ಳುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಕಳೆದ ನೆವಂಬರ್ನಲ್ಲಿ ಮಧುರೈ ಜಿಲ್ಲೆಯಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿ ಐವರು ಸಾವಿಗೀಡಾಗಿದ್ದರು. ಅಲ್ಲದೇ, 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. ಅಲ್ಲದೇ, ಈ ಸ್ಫೋಟದಲ್ಲಿ ಮೂರು ಕಟ್ಟಡಗಳು ಭಾಗಶಃ ಹಾನಿಯಾಗಿದ್ದವು. ಸ್ಫೋಟದ ತೀವ್ರತೆಗೆ ಮೃತರ ದೇಹದ ಭಾಗಗಳು ಕಾರ್ಖಾನೆಯ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಇದಕ್ಕೂ ಮುನ್ನ ವಿರುಧುನಗರ ಜಿಲ್ಲೆಯಲ್ಲೂ ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟ ಸಂಭವಿಸಿ, ಮೂವರು ಮೃತಪಟ್ಟಿದ್ದರು. ಅಲ್ಲದೇ, ಏಳಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಇಲ್ಲಿನ ಸತ್ತೂರು ಸಮೀಪದ ಮಂಜಲ್ ಒಡೆಯಪಟ್ಟಿಯಲ್ಲಿ ನಡೆದಿದೆ. ಕರುಪ್ಪಸ್ವಾಮಿ ಎಂಬುವರಿಗೆ ಸೇರಿದ ಪಟಾಕಿ ಕಾರ್ಖಾನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಕಾರ್ಖಾನೆಯ ಮಾಲೀಕ ಕರುಪ್ಪಸ್ವಾಮಿ ಮತ್ತು ಆತನ ಸಂಬಂಧಿ ಸೆಂಥಿಲ್ ಕುಮಾರ್ ಎಂಬುವರು ಪಟಾಕಿ ತಯಾರಿಸಲು ಕೆಮಿಕಲ್ಸ್ ಮಿಶ್ರಣ ಮಾಡುತ್ತಿದ್ದರು. ಈ ವೇಳೆ ಸ್ಫೋಟ ಉಂಟಾಗಿ ಈ ದುರಂತ ನಡೆದಿತ್ತು.
ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ಐವರ ದುರ್ಮರಣ, 11 ಮಂದಿಗೆ ಗಂಭೀರ ಗಾಯ