ಸಿವಾನ್: ಬಿಹಾರದಲ್ಲಿ ಮತ್ತೆ ನಕಲಿ ಮದ್ಯದ ದುರಂತ ಸದ್ದು ಮಾಡಿದೆ. ಸಿವಾನ್ ಜಿಲ್ಲೆಯ ಲಕ್ಡಿ ನಾವಿಗಂಜ್ ಬ್ಲಾಕ್‌ನ ಬಾಲಾ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ ಇದುವರೆಗೆ ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಲಾಗ್ತಿದೆ. ಆದರೆ, ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮಸ್ಥರ ಪ್ರಕಾರ, ನಕಲಿ ಮದ್ಯ ಸೇವಿಸಿದ ಪ್ರಕರಣದಲ್ಲಿ ನರೇಶ್ ರಾವುತ್ ಎಂಬಾತ ಮೊದಲಿಗೆ ಮೃತಪಟ್ಟಿದ್ದ. ಗ್ರಾಮದಲ್ಲಿಯೇ ಆತನ ಶವಸಂಸ್ಕಾರ ಮಾಡಲಾಗಿತ್ತು.
ಈತನ ಅಂತ್ಯಸಂಸ್ಕಾರ ನಡೆದ ಕೆಲ ಹೊತ್ತಿನಲ್ಲಿಯೇ ಗ್ರಾಮದ ಇನ್ನು ಕೆಲವರ ಆರೋಗ್ಯ ಹದಗೆಟ್ಟಾಗ ಜನರಲ್ಲಿ ಆತಂಕ ಶುರುವಾಗಿತ್ತು. ಅನಾರೋಗ್ಯಕ್ಕೀಡಾದ ಎಲ್ಲ ಅಸ್ವಸ್ಥರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಸ್ವಸ್ಥನಾಗಿದ್ದ ಜನಕದೇವ್ ಎಂಬಾತ ಆಸ್ಪತ್ರೆ ತಲುಪುವ ಮುನ್ನವೇ ಸಾವನ್ನಪ್ಪಿದ್ದಾನೆ. ನಕಲಿ ಮದ್ಯ ತಯಾರಿಕೆಯ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಜಿಲ್ಲಾಡಳಿತ ದಾಳಿ ನಡೆಸುತ್ತಿದೆ. ಇದೇ ವೇಳೆ ಅಸ್ವಸ್ಥರನ್ನು ಗುರುತಿಸಿ ಆಸ್ಪತ್ರೆಗೆ ಕರೆತರುವ ಕಾರ್ಯವೂ ನಡೆಯುತ್ತಿದೆ.
ನಕಲಿ ಮದ್ಯ ಸೇವನೆ ಪ್ರಕರಣ ಮುಚ್ಚಿಹಾಕಲು ಯತ್ನಿಸಿತಾ ಜಿಲ್ಲಾಡಳಿತ?: ಬಾಲಾ ಗ್ರಾಮದಿಂದ ಚಿಂತಾಜನಕ ಸ್ಥಿತಿಯಲ್ಲಿ ಪಟ್ಟಣದ ಆಸ್ಪತ್ರೆಗೆ ಕರೆತರಲಾದ ಧುರೇಂದ್ರ ಮಾಂಝಿ ಎಂಬಾತ ತಾನು ನಕಲಿ ಮದ್ಯ ಸೇವಿಸಿದ್ದನ್ನು ಕ್ಯಾಮರಾಗಳ ಮುಂದೆ ಹೇಳಿದ್ದಾನೆ. ಆದರೆ ಇಷ್ಟರಲ್ಲೇ ಆತನ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ಆತ ಇನ್ನೇನೋ ಹೇಳುವಷ್ಟರಲ್ಲಿ ಜಿಲ್ಲಾಡಳಿತದ ಅಧಿಕಾರಿ ಆತನನ್ನು ತಡೆದರು. ಅಷ್ಟೇ ಅಲ್ಲದೆ ಮಾಧ್ಯಮದವರ ಕ್ಯಾಮರಾಗಳನ್ನು ಕೂಡ ಸ್ವಿಚ್ ಆಫ್ ಮಾಡಿಸಿದರು ಎಂದು ತಿಳಿದುಬಂದಿದೆ. ಸದ್ಯ ಮೃತರನ್ನು 1. ನರೇಶ್ ರಾವುತ್, 2. ಜನಕ್ ಪ್ರಸಾದ್, 3. ರಮೇಶ್ ರಾವತ್ ಮತ್ತು 4. ಸುರೇಂದ್ರ ಮಾಂಝಿ ಎಂದು ಗುರುತಿಸಲಾಗಿದೆ.
ನಕಲಿ ಮದ್ಯ ಸೇವಿಸಿದ ಜನರು: ಬಾಲಾ ಗ್ರಾಮದ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಬಗ್ಗೆ ಅದೇ ಗ್ರಾಮದ ಜಿಲ್ಲಾ ಕೌನ್ಸಿಲರ್ ರಮೇಶ್ ಕುಮಾರ್ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. ಇನ್ನೂ ಅನೇಕ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ನಕಲಿ ಮದ್ಯ ಕುಡಿದವರು ಏಳು ಜನ: ಜನವರಿ 22 ರ ರಾತ್ರಿ, ಸಿವಾನ್‌ನ ನಬೀಬ್‌ಗಂಜ್‌ನ ಭೋಪತ್‌ಪುರ ಪಂಚಾಯತ್‌ನ ಬಾಲಾ ಗ್ರಾಮದ ಏಳು ಜನರು ಮದ್ಯ ಸೇವನೆ ಮಾಡಿದ್ದರು. ಕೆಲವು ಗಂಟೆಗಳ ಸೇವನೆಯ ನಂತರ, ನರೇಶ್ ಎಂಬಾತನ ಆರೋಗ್ಯ ಹದಗೆಡಲು ಪ್ರಾರಂಭಿಸುತ್ತದೆ. ಆದರೆ ಆತನಿಗೆ ಏನಾಗಿದೆ ಎಂದು ಕುಟುಂಬಸ್ಥರಿಗೆ ತಿಳಿಯುವ ಮುನ್ನವೇ ಆತ ಸಾವನ್ನಪ್ಪಿದ್ದ.
ಛಾಪ್ರಾದಲ್ಲಿ 75 ಮಂದಿ ಸಾವು: ಕಳೆದ ತಿಂಗಳು ಛಾಪ್ರಾದಲ್ಲಿ 75 ಮಂದಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದರು. ಈ ಸಾವುಗಳು ಸರನ್‌ನ ಮಶ್ರಕ್, ಮಧುರಾ, ಇಸುಪುರ್ ಮತ್ತು ಅಮ್ನೌರ್ ಬ್ಲಾಕ್‌ಗಳಲ್ಲಿ ಮಾತ್ರ ಸಂಭವಿಸಿವೆ. ಈ ವಿಚಾರದಲ್ಲಿ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದು, ಇದೀಗ ಸಿವಾನ್‌ನಲ್ಲಿ ವಿಷಪೂರಿತ ಮದ್ಯವು ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಛಾಪ್ರಾ ಪ್ರಕರಣದ ತನಿಖೆಗೆ ಮಾನವ ಹಕ್ಕುಗಳ ತಂಡವೂ ಬಂದಿದ್ದು, ಹಲವು ವಿಷಯಗಳು ಬಯಲಿಗೆ ಬಂದಿವೆ. ಮದ್ಯ ಸಾಗಾಣಿಕೆದಾರರು ಗ್ರಾಮದಲ್ಲಿಯೇ ವಿಷಪೂರಿತ ಮದ್ಯ ತಯಾರಿಸಿ ಕಳ್ಳಸಾಗಣೆ ಮಾಡುತ್ತಾರೆ ಎಂದು ಗ್ರಾಮದ ಜನರು ತಂಡಕ್ಕೆ ತಿಳಿಸಿದ್ದರು. ಆದರೆ ಇಂತಹ ಎಲ್ಲಾ ಪ್ರಕರಣಗಳಲ್ಲಿ ಆಡಳಿತದ ಪಾತ್ರ ಅನುಮಾನಾಸ್ಪದವಾಗಿ ಕಂಡು ಬರುತ್ತಿದ್ದು, ಜನರ ಸಾವಿಗೆ ಆಡಳಿತವೇ ಕಾರಣ ಎಂದು ಆರೋಪಿಸಲಾಗುತ್ತಿದೆ.
ಇದನ್ನೂ ಓದಿ: ಬಜೆಟ್ 2023: ಷೇರು ಮಾರುಕಟ್ಟೆ ಮೇಲೆ ಪರಿಣಾಮವೇನು?.. ಏನು ಹೇಳುತ್ತೆ ಮಾರ್ಗನ್ ಸ್ಟಾನ್ಲಿ ರಿಪೋರ್ಟ್