ಭದ್ರಾದ್ರಿ ಕೊತಗುಡೆಮ್ (ತೆಲಂಗಾಣ): ಮುಸ್ಲಿಮರ ಉರುಸ್ ಸಂಭ್ರಮಗಳಲ್ಲಿ ಹಿಂದೂಗಳು ಭಾಗಿಯಾಗುವುದು, ಹಿಂದೂಗಳ ಹಬ್ಬ ಗಣೇಶೋತ್ಸವದಲ್ಲಿ ಮುಸ್ಲಿಮರು ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸುವ ಅನೇಕ ಸಾಮರಸ್ಯದ ಘಟನೆಗಳನ್ನು ನಾವು ಕಂಡಿದ್ದೇವೆ. ಈಗ ಮತ್ತೊಮ್ಮೆ ಇಂಥದ್ದೇ ಧಾರ್ಮಿಕ ಭಾವೈಕ್ಯತೆಯ ಸಂದೇಶ ಸಾರುವ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಮ್ ಎಂಬಲ್ಲಿನ ಸತ್ಯನಾರಾಯಣಪುರಂನಲ್ಲಿರುವ ದರ್ಗಾದಲ್ಲಿ ನಡೆದಿದೆ. ದರ್ಗಾದಲ್ಲಿ ಶ್ರೀರಾಮ ಮತ್ತು ಸೀತಾ ದೇವಿಯ ಕಲ್ಯಾಣವನ್ನು ಹಿಂದೂ ಮತ್ತು ಮುಸ್ಲಿಮರು ಒಟ್ಟುಸೇರಿ ಆಚರಿಸಿದರು. ಈ ಮೂಲಕ ಎರಡೂ ಸಮುದಾಯದ ಜನರು ಸಾಮರಸ್ಯದಿಂದ ಬದುಕುವ ಸಂದೇಶ ಪಸರಿಸಿದರು.
40 ವರ್ಷಗಳಿಂದ ನಡೆದು ಬಂದ ಆಚರಣೆ: ಉಭಯ ಧರ್ಮಗಳ ಸಾಮರಸ್ಯದ ಸಂಕೇತವಾಗಿ ದರ್ಗಾದಲ್ಲಿ ಸೀತಾರಾಮ ಕಲ್ಯಾಣವನ್ನು ಏರ್ಪಡಿಸಲಾಗಿತ್ತು. ದರ್ಗಾದಲ್ಲಿ ರಾಮನವಮಿ ಜೊತೆಗೆ ಹಿಂದೂಗಳು ಹಜರತ್ ನಕೂಲ್ ಮೀರಾ ಉರುಸ್ ಅನ್ನು ಕಳೆದ 40 ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಈಗ ಇದೇ ಮಾದರಿಯಲ್ಲಿ ದರ್ಗಾದಲ್ಲಿ ಮುಸ್ಲಿಮರು ಶ್ರೀ ರಾಮನವಮಿ ಆಚರಸಿದ್ದಾರೆ. ಈ ಪೂಜೆಯಲ್ಲಿ ಯಾವುದೇ ಜಾತಿ, ಧರ್ಮದ ತಾರತಮ್ಯವಿಲ್ಲ. ಪ್ರತಿಯೊಬ್ಬರೂ ಭಾಗಿಯಾಗಲು ಅವಕಾಶ ನೀಡಲಾಗಿತ್ತು.
ದರ್ಗಾದಲ್ಲಿ ಪ್ರತಿ ವರ್ಷ ಹಜರತ್ ನಕುಲ್ ಮೀರಾ ಉರುಸ್ ಮತ್ತು ಶ್ರೀ ರಾಮನವಮಿಯನ್ನು ಒಟ್ಟಿಗೆ ಆಚರಿಸಲಾಗುತ್ತದೆ. ಸೀತಾರಾಮ ಕಲ್ಯಾಣಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸ್ಥಳೀಯ ಬ್ರಾಹ್ಮಣ ಅರ್ಚಕರ ಸಹಾಯದಿಂದ ಈ ಆಚರಣೆ ಅದ್ದೂರಿಯಾಗಿ ನಡೆಯುತ್ತದೆ. ಮತ್ತೊಂದು ವಿಶೇಷತೆ ಎಂದರೆ, ದರ್ಗಾದ ಮಾಲೀಕ್ (ಅರ್ಚಕರು) ಕೂಡ ಹಿಂದೂ. ಅವರೇ ದರ್ಗಾದ ಆಚರಣೆಯನ್ನು ಹಲವು ಕಾಲಗಳಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಇವರನ್ನು ಮುಸ್ಲಿಂ ಸಮುದಾಯದವರು ಒಪ್ಪಿಕೊಂಡಿದ್ದಾರೆ.
ಮತ್ತೊಂದು ಘಟನೆ: ಇದೇ ರೀತಿಯ ಮತ್ತೊಂದು ಘಟನೆಯೂ ಕೂಡ ತೆಲಂಗಾಣದ ಖಮ್ಮಂನ ತಲ್ಲಡಾದಲ್ಲಿ ನಡೆಯುತ್ತದೆ. ಇಲ್ಲಿನ ಗ್ರಾಮದಲ್ಲಿ ನಡೆಯುವ ರಾಮನವಮಿ ಉತ್ಸವದಲ್ಲಿ ಮುಸ್ಲಿಮರು ಆಗಮಿಸಿ, ದೇವರ ಆಶೀರ್ವಾದ ಪಡೆಯುತ್ತಾರೆ. ಮಂಡಲ್ ಪರಿಷದ್ ಕೊ ಅಪ್ಷನ್ ಸದಸ್ಯರಾದ ಎಸಬ್ ದಂಪತಿ ಹಿಂದೂಗಳು ಸಾಮಾನ್ಯವಾಗಿ ಧರಿಸುವ ರೇಷ್ಮೆ ಮತ್ತು ತಲಂಬರದೊಂದಿಗೆ ಹಾಜರಾಗುತ್ತಾರೆ. ಇಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ನಡೆಯುವ ಸೀತಾರಾಮ ಕಲ್ಯಾಣದಲ್ಲಿ ಭಾಗಿಯಾಗುವ ದಂಪತಿಯನ್ನು ದೇವಸ್ಥಾನದ ಸಮಿತಿ ಸದಸ್ಯರು ಸನ್ಮಾನಿಸುತ್ತಾರೆ.
ಇದನ್ನೂ ಓದಿ: Ram Navami 2023: ಈ ಬ್ಯಾಂಕ್ ಅಲ್ಲಿ ದುಡ್ಡಲ್ಲ, ಜಮೆಯಾಗತ್ತೆ 'ರಾಮ ನಾಮ'; ವಾರಾಣಾಸಿಯಲ್ಲೊಂದು ವಿಶೇಷ