ಹೈದರಾಬಾದ್: ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ (International Federation of Journalists- IFJ) 30ನೇ ವಾರ್ಷಿಕ ವರದಿ ಪ್ರಕಟವಾಗಿದ್ದು, ವಿಶ್ವಾದ್ಯಂತ ವಿವಿಧ ದೇಶಗಳಲ್ಲಿ ಪತ್ರಕರ್ತರ ಸ್ಥಿತಿಗತಿ ಹೇಗಿದೆ ಎಂಬುದರ ವಾಸ್ತವ ಚಿತ್ರಣವನ್ನು ಅನಾವರಣಗೊಳಿಸಿದೆ. 30ನೇ ವಾರ್ಷಿಕ ವರದಿಯ ಒಂದು ಅವಲೋಕನ ಇಲ್ಲಿದೆ.
1990 ರಿಂದ ನವೆಂಬರ್ 2020 ರವರೆಗೆ ಕೊಲೆಯಾಗಿದ್ದಾರೆ 2658 ಪತ್ರಕರ್ತರು
ಕಳೆದ ಮೂರು ದಶಕಗಳಲ್ಲಿ ಅಂದರೆ 1990 ರಿಂದ ನವೆಂಬರ್ 2020ರವರೆಗೆ ವಿಶ್ವದಲ್ಲಿ ಒಟ್ಟು 2658 ಪತ್ರಕರ್ತರನ್ನು ಕೊಲೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಇವುಗಳಲ್ಲಿ ಶೇ 50ರಷ್ಟು ಕೊಲೆಗಳು ಅತಿ ಹೆಚ್ಚು ಯುದ್ಧಪೀಡಿತ, ಅಪರಾಧ ಹೆಚ್ಚಾಗಿರುವ ಹಾಗೂ ಭ್ರಷ್ಟಾಚಾರ ಮಿತಿಮೀರಿದ ದೇಶಗಳು ಮತ್ತು ಹಠಾತ್ತಾಗಿ ಕಾನೂನು, ಸುವ್ಯವಸ್ಥೆ ಹಾಳಾಗುವ ದೇಶಗಳಲ್ಲಿ ಸಂಭವಿಸಿವೆ. ಕಳೆದ ಮೂವತ್ತು ವರ್ಷಗಳಲ್ಲಿ ಇರಾಕಿನಲ್ಲಿ ಅತಿಹೆಚ್ಚು ಅಂದರೆ 339 ಪತ್ರಕರ್ತರನ್ನು ಕೊಲ್ಲಲಾಗಿದೆ. ಹಾಗೆಯೇ ಮೆಕ್ಸಿಕೊ-175, ಫಿಲಿಪೀನ್ಸ್-159, ಪಾಕಿಸ್ತಾನ-138, ಭಾರತ-116, ರಷ್ಯಾ ಒಕ್ಕೂಟ-110, ಅಲ್ಜೀರಿಯಾ-106, ಸಿರಿಯಾ-96, ಸೊಮಾಲಿಯಾ-93 ಮತ್ತು ಅಫ್ಘಾನಿಸ್ತಾನದಲ್ಲಿ-93 ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ.
ಪತ್ರಕರ್ತರ ಪಾಲಿಗೆ 2006 ಮತ್ತು 2007 ಅತಿ ಹೆಚ್ಚು ಭೀಕರವಾಗಿದ್ದು, ಕ್ರಮವಾಗಿ ಈ ವರ್ಷಗಳಲ್ಲಿ 155 ಮತ್ತು 135 ಜನ ಕೊಲೆಗೀಡಾಗಿದ್ದಾರೆ. ಇರಾಕ್ ಯುದ್ಧ ಹಾಗೂ ಜನಾಂಗೀಯ ಹಿಂಸಾಚಾರಗಳು ಅತ್ಯಂತ ಹೆಚ್ಚಾಗಿ ನಡೆಯುತ್ತಿದ್ದ ವರ್ಷಗಳು ಇವಾಗಿದ್ದವು.
ವಿಶ್ವದಲ್ಲಿ ಇರಾಕ್ ಪತ್ರಕರ್ತರ ಪಾಲಿಗೆ ಅತ್ಯಂತ ನರಕ ಸದೃಶ ರಾಷ್ಟ್ರವಾಗಿರುವುದು ಸ್ಪಷ್ಟವಾಗಿದೆ. 2000ದ ಹಿಂದಿನ ದಶಕದವರೆಗೂ ಇರಾಕಿನಲ್ಲಿ ಪತ್ರಕರ್ತರ ಕೊಲೆಗಳು ಗಮನಾರ್ಹ ಪ್ರಮಾಣದಲ್ಲಿ ನಡೆದಿರಲಿಲ್ಲವಾದರೂ, 2003ರ ನಂತರ ಬ್ರಿಟಿಷ್ ಹಾಗೂ ಅಮೆರಿಕ ಸೇನಾಪಡೆಗಳು ಇರಾಕ್ ಮೇಲೆ ದಾಳಿ ನಡೆಸಿದ ಮೇಲೆ ಪತ್ರಕರ್ತರ ಕೊಲೆಗಳು ವಿಪರೀತವಾದವು.
ಕೋವಿಡ್-19 ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಸಂಕಷ್ಟ
ಕೋವಿಡ್-19 ಬಗ್ಗೆ ವರದಿ ಮಾಡುವಲ್ಲಿ ನಿರತರಾಗಿದ್ದ ಪ್ರತಿ ನಾಲ್ಕು ವರದಿಗಾರರಲ್ಲಿ ಮೂರು ವರದಿಗಾರರು ಒಂದಿಲ್ಲೊಂದು ರೀತಿಯಲ್ಲಿ ಅಡೆತಡೆ, ಬೆದರಿಕೆ ಅಥವಾ ಹಲ್ಲೆಗಳನ್ನು ಎದುರಿಸಿದ್ದಾರೆ. ಕೋವಿಡ್-19 ಕುರಿತಾಗಿ ಮುಂಚೂಣಿಯಲ್ಲಿ ನಿಂತು ವರದಿ ಮಾಡುತ್ತಿದ್ದ 77 ದೇಶಗಳ 1300 ಪತ್ರಕರ್ತರನ್ನು ಸಂದರ್ಶಿಸಿ ನಡೆಸಲಾದ ಸಮೀಕ್ಷೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಫೆಡರೇಶನ್ನ 30ನೇ ವಾರ್ಷಿಕ ವರದಿ ಹೇಳಿದೆ.
- ಮೂರನೇ ಎರಡರಷ್ಟು ಪತ್ರಿಕೋದ್ಯಮ ಸಿಬ್ಬಂದಿ ಹಾಗೂ ಹವ್ಯಾಸಿ ಪತ್ರಕರ್ತರು ತಮ್ಮ ಆದಾಯ ಮತ್ತು ನೌಕರಿ ಅವಕಾಶಗಳನ್ನು ಕಳೆದುಕೊಂಡಿದ್ದಾರೆ.
- ಬಹುತೇಕ ಪ್ರತಿಯೊಬ್ಬ ಹವ್ಯಾಸಿ ಪತ್ರಕರ್ತ ತನ್ನ ಆದಾಯ ಹಾಗೂ ಕೆಲಸದ ಅವಕಾಶಗಳನ್ನು ಕಳೆದುಕೊಂಡಿದ್ದಾನೆ.
- ಅರ್ಧಕ್ಕಿಂತ ಹೆಚ್ಚು ಜನ ಪತ್ರಕರ್ತರು ಒತ್ತಡ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ.
- ಶೇ 25 ರಷ್ಟು ಪತ್ರಕರ್ತರು ತಾವು ಮನೆಯಿಂದ ಕೆಲಸ (ವರ್ಕ್ ಫ್ರಂ ಹೋಂ) ಮಾಡಲು ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ. ಇನ್ನು ಪ್ರತಿ ನಾಲ್ವರಲ್ಲಿ ಓರ್ವ ಪತ್ರಕರ್ತನಿಗೆ ಹೊರಗಡೆ ಕೆಲಸ ಮಾಡುವಾಗ ಧರಿಸಲು ಅಗತ್ಯವಾದ ಸುರಕ್ಷತಾ ಸಲಕರಣೆಗಳು ಲಭ್ಯವಿಲ್ಲ.
- ನೂರಾರು ಪತ್ರಕರ್ತರನ್ನು ಅಕ್ರಮವಾಗಿ ಬಂಧಿಸಿ, ಹಿಂಸಿಸಲಾಗಿದೆ. ಅಲ್ಲದೇ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
- ಸುಮಾರು ಮೂರನೇ ಒಂದರಷ್ಟು ಪತ್ರಕರ್ತರು ಕೇವಲ ಕೋವಿಡ್-19 ವರದಿಗಾರಿಕೆಗಾಗಿಯೇ ತಮ್ಮನ್ನು ತೊಡಗಿಸಿಕೊಳ್ಳಬೇಕಾಯಿತು.
- ಬಹುತೇಕ ಪತ್ರಕರ್ತರು ತಾವು ಇರುವ ರಾಷ್ಟ್ರಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅಧೋಗತಿಗೆ ತಲುಪಿದೆ ಎಂದು ಹೇಳಿದ್ದಾರೆ.
- ಹಲವಾರು ದೇಶಗಳಲ್ಲಿನ ಪತ್ರಕರ್ತರು ಯಾವುದೇ ಸಾಮಾಜಿಕ ಹಾಗೂ ವೃತ್ತಿ ಭದ್ರತೆ ಇಲ್ಲದೆ ಅತಂತ್ರದ ಜೀವನ ಸಾಗಿಸುತ್ತಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯ ಪತ್ರಿಕೋದ್ಯಮ ಬೆಳವಣಿಗೆಗೆ ಏನು ಮಾಡಬಹುದು?
- ತಂತ್ರಜ್ಞಾನ ದೈತ್ಯ ಕಂಪನಿಗಳಾದ ಫೇಸ್ಬುಕ್ ಮತ್ತು ಗೂಗಲ್ಗಳಂಥ ಸಂಸ್ಥೆಗಳ ಆದಾಯದ ಮೇಲೆ ತೆರಿಗೆ ವಿಧಿಸಿ ಆ ತೆರಿಗೆ ಹಣದಿಂದ ನಿಧಿ ಸ್ಥಾಪಿಸಿ ಅದರಿಂದ ಜಾಗತಿಕವಾಗಿ ಸ್ವತಂತ್ರ ಮಾಧ್ಯಮ ಬೆಂಬಲಿಸುವ ಕ್ರಮ ಕೈಗೊಳ್ಳಬಹುದು.
- ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳ ಮೇಲಿನ ತೆರಿಗೆ ಹಾಗೂ ಹಣಕಾಸು ಹೊರೆಯನ್ನು ತಗ್ಗಿಸುವುದು.
- ಸ್ಥಳೀಯ ಮಾಧ್ಯಮಗಳ ಸಶಕ್ತೀಕರಣಕ್ಕಾಗಿ ಆರೋಗ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ಜಾಹೀರಾತು ನೀಡುವುದು.
ಕಳೆದ 30 ವರ್ಷಗಳಲ್ಲಿ ಕೊಲೆಯಾದ ಪತ್ರಕರ್ತರ ಸಂಖ್ಯೆ- ವರ್ಷವಾರು
ವರ್ಷ | ಕೊಲೆಯಾದ ಪತ್ರಕರ್ತರ ಸಂಖ್ಯೆ |
1991 | 75 |
1992 | 65 |
1993 | 93 |
1994 | 121 |
1995 | 77 |
1996 | 60 |
1997 | 48 |
1998 | 37 |
1999 | 67 |
2000 | 37 |
2001 | 100 |
2002 | 70 |
2003 | 92 |
2004 | 129 |
2005 | 80 |
2006 | 155 |
2007 | 135 |
2008 | 85 |
2009 | 113 |
2010 | 94 |
2011 | 101 |
2012 | 121 |
2013 | 105 |
2014 | 118 |
2015 | 112 |
2016 | 93 |
2017 | 82 |
2018 | 95 |
2019 | 49 |
2020 | 42 |
1990 ರಿಂದ 2020ರ ಅವಧಿಯಲ್ಲಿ ಕೊಲೆಗೀಡಾದ ಪತ್ರಕರ್ತರ ಸಂಖ್ಯೆ- ವಲಯವಾರು (2020 ನವೆಂಬರ್ ವರೆಗೆ)
ದೇಶ | 1990 ರಿಂದೀಚೆ ಕೊಲೆಯಾದ ಪತ್ರಕರ್ತರ ಸಂಖ್ಯೆ |
ಏಶಿಯಾ - ಪೆಸಿಫಿಕ್ | 683 |
ಅಮೆರಿಕ ( ಸೌತ್ ಮತ್ತು ನಾರ್ತ್ ಅಮೆರಿಕ) | 574 |
ಮಧ್ಯ ಪ್ರಾಚ್ಯ ಮತ್ತು ಅರಬ್ ದೇಶಗಳು | 561 |
ಆಫ್ರಿಕಾ | 467 |
ಯುರೋಪ್ | 373 |
ಪತ್ರಕರ್ತರಿಗೆ ಅತಿ ಅಪಾಯಕಾರಿ ದೇಶಗಳು
ದೇಶ | 1990 ರಿಂದ ನವೆಂಬರ್ 2020 ರವರೆಗೆ ಕೊಲೆಯಾದ ಪತ್ರಕರ್ತರ ಸಂಖ್ಯೆ |
ಇರಾಕ್ | 340 |
ಮೆಕ್ಸಿಕೊ | 178 |
ಫಿಲಿಪೀನ್ಸ್ | 160 |
ಪಾಕಿಸ್ತಾನ | 138 |
ಭಾರತ | 116 |
2020 ರಲ್ಲಿ ಕೊಲೆಗೀಡಾದ ಪತ್ರಕರ್ತರ ಸಂಖ್ಯೆ- ದೇಶವಾರು
ದೇಶ | ಕೊಲೆಗೀಡಾದ ಪತ್ರಕರ್ತರ ಸಂಖ್ಯೆ (ನವೆಂಬರ್ 2020 ರಲ್ಲಿದ್ದಂತೆ) |
ಮೆಕ್ಸಿಕೊ | 13 |
ಅಫ್ಘಾನಿಸ್ತಾನ | 5 |
ಭಾರತ | 3 |
ನೈಜೀರಿಯಾ | 3 |
ಇರಾಕ್ | 3 |
2020ರಲ್ಲಿ ಜೈಲಿಗಟ್ಟಲಾದ ಪತ್ರಕರ್ತರ ಅಂಕಿ-ಸಂಖ್ಯೆಗಳು
ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ವರದಿಯ ಪ್ರಕಾರ, ವಿಶ್ವದ 34 ದೇಶಗಳಲ್ಲಿ 235 ಪತ್ರಕರ್ತರನ್ನು ವೃತ್ತಿಪರ ಕಾರಣಗಳಿಗಾಗಿ ಜೈಲಿಗಟ್ಟಲಾಗಿದೆ.
ವರದಿಯ ಪ್ರಕಾರ, ಯುರೋಪ್ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಹಾಕಲಾಗಿದೆ. ಈ ದೇಶಗಳಲ್ಲಿ 91 ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗಿದ್ದು, ಅದರಲ್ಲೂ ಟರ್ಕಿ ಹಾಗೂ ಬೆಲಾರುಸ್ ದೇಶಗಳಲ್ಲಿ ಈ ಸಂಖ್ಯೆ ಹೆಚ್ಚಾಗಿದೆ.