ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಹಿಂದಿನ ರೂವಾರಿಯೆಂದೇ ಹೇಳಲಾದ ಗೋಲ್ಡಿ ಬ್ರಾರ್ನನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಇಲ್ಲಿಯವರೆಗೆ ಈ ಬಗ್ಗೆ ಅಮೆರಿಕದ ಅಧಿಕಾರಿಗಳು ಭಾರತದೊಂದಿಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.
ಮೂಲಗಳ ಪ್ರಕಾರ, ಗೋಲ್ಡಿ ಬ್ರಾರ್ನನ್ನು ಕ್ಯಾಲಿಫೋರ್ನಿಯಾದ ಪೊಲೀಸರು ನವೆಂಬರ್ 20 ಅಥವಾ ಅದಕ್ಕೂ ಮೊದಲೇ ಬಂಧಿಸಿದ್ದಾರೆ ಎಂಬ ಮಾಹಿತಿ ಈಗಾಗಲೇ ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ತಲುಪಿದೆ. ಭಾರತೀಯ ಅಧಿಕಾರಿಗಳು ಅಮೆರಿಕದ ತನಿಖಾ ಏಜೆನ್ಸಿಗಳನ್ನು ಸಂಪರ್ಕಿಸುತ್ತಿದ್ದಾರೆ. ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಂದರ್ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.
ಕೆನಡಾದಲ್ಲಿ ವಾಸವಾಗಿದ್ದ ಗೋಲ್ಡಿ ಬ್ರಾರ್, ಕೆಲವು ವಾರಗಳ ಹಿಂದೆಯಷ್ಟೇ ಸುರಕ್ಷತೆ ದೃಷ್ಟಿಯಿಂದ ಕ್ಯಾಲಿಫೋರ್ನಿಯಾಗೆ ಪಲಾಯನ ಮಾಡಿದ್ದನು. ಅಲ್ಲಿಗೆ ತೆರಳಿದ ಬಳಿಕ ಇಬ್ಬರು ವಕೀಲರ ನೆರವಿನೊಂದಿಗೆ ರಾಜಕೀಯ ಆಶ್ರಯ ಪಡೆಯಲು ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮೇ. 29ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೆಲವು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು. ಬಳಿಕ, ಗೋಲ್ಡಿ ಬ್ರಾರ್ ಮೂಸೆವಾಲಾ ಹತ್ಯೆಯ ಹೊಣೆ ಹೊತ್ತುಕೊಂಡಿದ್ದ.
ಇದನ್ನೂ ಓದಿ: ದರೋಡೆಕೋರ ಗೋಲ್ಡಿ ಬ್ರಾರ್ ಫೋಟೋದೊಂದಿಗೆ ಬ್ಯಾಂಕ್ ಖಾತೆ ತೆರೆಯಲು ಬಂದ ಆರೋಪಿಗಳಿಬ್ಬರು ಅರೆಸ್ಟ್