ಮಥುರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿಯಲ್ಲಿ ಜನವರಿ 2ರಿಂದ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಮಥುರಾ ಜಿಲ್ಲಾ ನ್ಯಾಯಾಲಯ ಶನಿವಾರ ಆದೇಶಿಸಿದೆ.
17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ ತೆರವು ಮಾಡಬೇಕೆಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ. ಇದರ ಭಾಗವಾಗಿ ಹಿಂದೂ ಸೇನೆಯ ವಿಷ್ಣು ಗುಪ್ತಾ ಎಂಬುವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ. ಅಲ್ಲದೇ, ಜ.20ರಂದು ಮಸೀದಿ ಸಂಕೀರ್ಣದ ಸಮೀಕ್ಷೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಶಾಹಿ ಮಸೀದಿಯಲ್ಲಿ ಹನುಮಾನ್ ಚಾಲೀಸ್ ಪಠಣಕ್ಕೆ ಕರೆ.. ಮಥುರಾದಲ್ಲಿ ಖಾಕಿ ಪಡೆ ಕಣ್ಗಾವಲು
ಶಾಹಿ ಈದ್ಗಾ ಮಸೀದಿಯನ್ನು 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿಯ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶ್ರೀಕೃಷ್ಣನ ಭಕ್ತರಾದ ತಮಗೆ ನ್ಯಾಯ ಕೇಳುವ ಮತ್ತು ಕೃಷ್ಣನ ನಿಜವಾದ ಜನ್ಮಸ್ಥಳದಲ್ಲಿ ಪೂಜೆ ಮಾಡುವ ಹಕ್ಕಿದೆ ಎಂದು ಡಿಸೆಂಬರ್ 8ರಂದು ಅರ್ಜಿ ಸಲ್ಲಿಸಲಾಗಿದೆ. ಈ ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿತ್ತು. ಇದರ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿ ಮಾಡಲಾಗಿತ್ತು. ಆದರೆ, ಡಿ.20ರಂದು ವಿಚಾರಣೆ ನಡೆದಿರಲಿಲ್ಲ. ಹೀಗಾಗಿ ಇಂದು ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತ್ತು.
ಇದನ್ನೂ ಓದಿ: ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಕೇಸ್: ಇತ್ಯರ್ಥಕ್ಕೆ 4 ತಿಂಗಳ ಗಡುವು ನೀಡಿದ ಕೋರ್ಟ್