ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲಿವಿ ಇನ್ ರಿಲೇಷನ್ಶಿಪ್ನಲ್ಲಿದ್ದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಅಂಶ ಬಹಿರಂಗವಾಗಿದೆ. ಹಂತಕ ಅಫ್ತಾಬ್ ಪೂನಾವಾಲಾ, ಶ್ರದ್ಧಾ ದೇಹವನ್ನು ತುಂಡುಗಳಾಗಿ ಕತ್ತರಿಸಲು ಗರಗಸವನ್ನು ಬಳಸಿದ್ದ ಎಂಬವುದು ಇದೀಗ ಬಯಲಾಗಿದೆ. ಶ್ರದ್ಧಾ ವಾಲ್ಕರ್ ಮೂಳೆಗಳ ವೈದ್ಯಕೀಯ ಪರೀಕ್ಷೆಯ ವರದಿ ಈ ಅಂಶವನ್ನು ದೃಢಪಡಿಸಿದೆ.
ಕಳೆದ ನವೆಂಬರ್ನಲ್ಲಿ ಶ್ರದ್ಧಾ ವಾಲ್ಕರ್ ಅವರನ್ನು ಆಕೆಯ ಗೆಳೆಯ ಅಫ್ತಾಬ್ ಪೂನಾವಾಲಾ ಕೊಂದು 35 ತುಂಡಗಳಾಗಿ ಕತ್ತರಿಸಿದ್ದ ಎಂಬ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ದೆಹಲಿ ಪೊಲೀಸರು ತೀವ್ರವಾದ ತನಿಖೆ ನಡೆಸುತ್ತಿದ್ದು, ಶ್ರದ್ಧಾ ದೇಹದ ಭಾಗಗಳ ಮರಣೋತ್ತರ ಹಾಗೂ ಡಿಎನ್‌ಎ ಪರೀಕ್ಷೆ ಕೈಗೊಂಡಿದ್ದು, ಕೊಲೆಗೆ ಸಂಬಂಧಿಸಿದ ಮಹತ್ವದ ಅಂಶಗಳು ಬಯಲಾಗುತ್ತಿದೆ.
ಇದನ್ನೂ ಓದಿ: 'ಮಗಳ ಕೊಂದ ಹಂತಕ ಅಫ್ತಾಬ್ನನ್ನು ಗಲ್ಲಿಗೇರಿಸಿ': ಶ್ರದ್ಧಾ ತಂದೆ ವಿಕಾಸ್ ವಾಲ್ಕರ್ ಆಗ್ರಹ
ಇದೀಗ ಶ್ರದ್ಧಾ ವಾಲ್ಕರ್ ಶವ ಪರೀಕ್ಷೆಯ ವರದಿಯಲ್ಲಿ ಮೂಳೆಗಳನ್ನು ಮಾಡಿ ಹರಿತವಾದ ಆಯುಧದಿಂದ ಕತ್ತರಿಸಿರುವುದು ಬೆಳಕಿಗೆ ಬಂದಿದೆ. ಇದಲ್ಲದೇ, ಮೂಳೆಗಳ ಡಿಎನ್‌ಎ ಪರೀಕ್ಷೆ ಮತ್ತು ಕೂದಲಿನ ಪ್ರಯೋಗಾಲಯ ಪರೀಕ್ಷೆಯು ಕಾಡಿನಲ್ಲಿ ಪತ್ತೆಯಾದ ಮೂಳೆಗಳು ಶ್ರದ್ಧಾ ವಾಲ್ಕರ್ ಅವರದ್ದೇ ಎಂದು ದೃಢಪಡಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಈ ಪ್ರಕರಣದ ಆರೋಪ ಪಟ್ಟಿಯನ್ನು ಪೊಲೀಸರು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಶ್ರದ್ಧಾ ಕೊಲೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ವಿಶೇಷ ಪೊಲೀಸ್ ಆಯುಕ್ತ ಡಾ.ಸಾಗರ್ ಪ್ರೀತ್ ಹೂಡಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಶ್ರದ್ಧಾ ವಾಲ್ಕರ್ ಮೊಳೆಗಳ ಡಿಎನ್‌ಎ ಹೊಂದಾಣಿಕೆ ವರದಿಯನ್ನು ಸ್ವೀಕರಿಸಲಾಗಿದೆ. ಈ ಪರೀಕ್ಷೆ ನಡೆಸಲು ಏಮ್ಸ್‌ನ ವೈದ್ಯರ ತಂಡ ರಚಿಸಲಾಗಿತ್ತು. ಈ ವೈದ್ಯರ ತಂಡದ ವರದಿಯು ಶ್ರದ್ಧಾ ದೇಹವನ್ನು ಹರಿತವಾದ ಆಯುಧದಿಂದ ಕತ್ತರಿಸಲಾಗಿದೆ ಎಂಬುವುದನ್ನು ಬಹಿರಂಗ ಪಡಿಸಿದೆ. ಅಲ್ಲದೇ, ದೇಹದ ಭಾಗಗಳನ್ನು ಕತ್ತರಿಸಲು ಗರಗಸವನ್ನು ಬಳಸಿರುವುದಾಗಿಯೂ ಸ್ವತಃ ಹಂತಕ ಅಫ್ತಾಬ್ ಪೂನಾವಾಲಾ ಒಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಶ್ರದ್ಧಾ ಶವದ ಪಕ್ಕ ಕುಳಿತು ಗಾಂಜಾ ಸೇದಿದ್ದ ಅಫ್ತಾಬ್: ಮತ್ತೊಂದು ಬ್ಯಾಗ್ ಪತ್ತೆ, ಸ್ನೇಹಿತರ ಚಾಟಿಂಗ್ ಪರಿಶೀಲನೆ
ಪ್ರಕರಣ ಹಿನ್ನೆಲೆ: ಶ್ರದ್ಧಾ ವಾಲ್ಕರ್ ಮತ್ತು ಅಫ್ತಾಬ್ ಪೂನಾವಾಲಾ ಇಬ್ಬರೂ ಲಿವಿ ಇನ್ ರಿಲೇಷನ್ಶಿಪ್ನಲ್ಲಿದ್ದರು. 2022ರ ಮೇ 18ರಂದು ಶ್ರದ್ಧಾರನ್ನು ಆರೋಪಿ ಅಫ್ತಾಬ್ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ಮನೆಯಲ್ಲಿ ಅಂದಾಜು ಮೂರು ವಾರಗಳ ಕಾಲ 300 ಲೀಟರ್ ಫ್ರಿಡ್ಜ್‌ನಲ್ಲಿಟ್ಟಿದ್ದ. ನಂತರ ದೇಹದ ಭಾಗಗಳನ್ನು ಬೇರೆ ಸ್ಥಳಗಳಲ್ಲಿ ಹಂತಕ ಎಸೆದಿದ್ದ. ಇದಾದ ಸುಮಾರು ಐದು ತಿಂಗಳ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣವು ಬೆಳಕಿಗೆ ಬಂದಿತ್ತು. ಅಂತೆಯೇ, ನವೆಂಬರ್ 12ರಂದು ಹಂತಕ ಅಫ್ತಾಬ್ನನ್ನು ಬಂಧಿಸಲಾಗಿತ್ತು.
ಅಲ್ಲದೇ, ಶ್ರದ್ಧಾ ಕೊಲೆಯಾದ ರಾತ್ರಿಯಿಡೀ ಆರೋಪಿ ಫ್ತಾಬ್ ಪೂನಾವಾಲಾ ಗಾಂಜಾ ಸೇದಿದ್ದ. ಅದೇ ಅಮಲಿನಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಸಾಯಿಸಿದ್ದ. ಇದಾದ ನಂತರವೂ ಆರೋಪಿ ಆಕೆ ಶವದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಗಾಂಜಾ ಸೇದಿದ್ದ. ಇದಾದ ಬಳಿಕ ಬೆಳಗ್ಗೆ ರೆಫ್ರಿಜರೇಟರ್ ಮತ್ತು ಗರಗಸ ತಂದು ಮೃತದೇಹವನ್ನು ತುಂಡರಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಎಂಬ ಅಂಶಗಳು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದ್ದವು.
ಇದನ್ನೂ ಓದಿ: ಕೋಪದಲ್ಲಿ ಕತ್ತು ಹಿಸುಕಿ ಕೊಂದು 35 ಪೀಸ್ ಮಾಡಿದೆ: ಕೋರ್ಟ್ಗೆ ತಿಳಿಸಿದ ಶ್ರದ್ಧಾ ಹಂತಕ ಅಫ್ತಾಬ್