ನವದೆಹಲಿ : ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಸಂಬಂಧ, ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ. ಆರೋಪಿಯು ತನ್ನ ಮನೆಯಿಂದ ಹೊರಬಂದು ರಸ್ತೆಯಲ್ಲಿ ಚೀಲವನ್ನು ಹೊತ್ತುಕೊಂಡು ಸಾಗುತ್ತಿರುವ ದೃಶ್ಯಗಳು ಕಂಡುಬಂದಿವೆ.
ಇನ್ನು ಈ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ರಸ್ತೆಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಇನ್ನು ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊಲೆ ಆರೋಪಿ ಅಫ್ತಾಬ್ ಮೇ 18 ರಂದು ಶ್ರದ್ಧಾಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದೆಹಲಿ ನಗರದೆಲ್ಲೆಡೆ ಎಸೆದಿರುವುದು ತನಿಖೆಯಿಂದ ತಿಳಿದುಬಂದಿತ್ತು.
ಸೋಮವಾರ ಮಂಪರು ಪರೀಕ್ಷೆ : ಪ್ರಕರಣ ಸಂಬಂಧ ಆರೋಪಿ ಅಫ್ತಾಬ್ ನನ್ನು ಸೋಮವಾರ ರೋಹಿಣಿಯಲ್ಲಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಸದ್ಯ ಅಫ್ತಾಬ್ನ ಐದು ದಿನಗಳ ಪೊಲೀಸ್ ಕಸ್ಟಡಿ ಮಂಗಳವಾರ ಕೊನೆಗೊಳ್ಳುತ್ತಿದ್ದು, ದೆಹಲಿ ಪೊಲೀಸರು ಮಂಪರು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಅದಕ್ಕೂ ಮೊದಲು ಅಫ್ತಾಬ್ನ ಮಾನಸಿಕ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ನಡೆಸಲಾಗುವ ಪರೀಕ್ಷೆಗಳನ್ನು ಪರಿಗಣಿಸಿ, ಬಳಿಕ ಮಂಪರು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ : ಶ್ರದ್ಧಾ ಶವದ ಪಕ್ಕ ಕುಳಿತು ಗಾಂಜಾ ಸೇದಿದ್ದ ಅಫ್ತಾಬ್: ಮತ್ತೊಂದು ಬ್ಯಾಗ್ ಪತ್ತೆ, ಸ್ನೇಹಿತರ ಚಾಟಿಂಗ್ ಪರಿಶೀಲನೆ