ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೊಲೀಸರು 3 ಸಾವಿರ ಪುಟಗಳ ಚಾರ್ಜ್‌ಶೀಟ್, 100 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ದೇಶವೇ ಬೆಚ್ಚಿ ಬೀಳುವಂತೆ ಶ್ರದ್ಧಾಳನ್ನು 35 ತುಂಡು ಮಾಡಿದ್ದ ಹಂತಕ ಅಫ್ತಾಬ್ ಅಮೀನ್ ಪೂನವಾಲಾ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗಿದೆ. ಲಿವ್ ಇನ್ ಗೆಳತಿಯನ್ನು ಕತ್ತು ಹಿಸುಕಿ ಕೊಂದು ಆಕೆಯ ದೇಹವನ್ನು ಗರಗಸದಿಂದ 35 ತುಂಡುಗಳಾಗಿ ಕತ್ತರಿಸಿದ್ದಲ್ಲದೇ, ನಿರ್ಜನ ಪ್ರದೇಶದಲ್ಲಿ ಚೆಲ್ಲಾಡಿದ್ದ ನರಹಂತಕನ ವಿರುದ್ಧ 100 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಚಾರ್ಜ್ ಶೀಟ್ನಲ್ಲಿ ಫೋರೆನ್ಸಿಕ್ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳೂ ಇವೆ ಎಂದು ಮೂಲಗಳು ತಿಳಿಸಿವೆ.
ಸಿದ್ಧಪಡಿಸಲಾದ ಚಾರ್ಜ್ ಶೀಟ್ ಕರಡನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದು, ಈ ತಿಂಗಳಾಂತ್ಯಕ್ಕೆ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಸಾಧ್ಯತೆ ಇದೆ. ಛತ್ತರ್‌ಪುರದ ಅರಣ್ಯದಿಂದ ಪತ್ತೆಯಾದ ಮೂಳೆಗಳು ಮತ್ತು ಅವುಗಳ ಡಿಎನ್‌ಎ ವರದಿ ಶ್ರದ್ಧಾ ಅವರದ್ದು ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಓದಿ: ಶ್ರದ್ಧಾ ಹತ್ಯೆ: ಅಫ್ತಾಬ್ನ ಧ್ವನಿ ಮಾದರಿ ದಾಖಲಿಸಿಕೊಂಡ ಸಿಎಫ್‌ಎಸ್‌ಎಲ್ ತಂಡ
ತನ್ನ ಗೆಳತಿಯನ್ನು ಹೇಗೆ ಕೊಂದೆ ಎಂಬ ಬಗ್ಗೆ ಹಂತಕ ಆಫ್ತಾಬ್ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಮತ್ತು ಕೊಲೆಯ ಭೀಕರತೆಯನ್ನು ಬಿಚ್ಚಿಟ್ಟ ನಾರ್ಕೋ ಪರೀಕ್ಷೆಯ ವರದಿಯನ್ನು ಸಹ ಚಾರ್ಜ್‌ಶೀಟ್ ಹೊಂದಿದೆ. ಈ ಎಲ್ಲಾ ದೋಷಾರೋಪಗಳು ನ್ಯಾಯಾಲಯದಲ್ಲಿ ಸಿಂಧುವಾಗದೇ ಇದ್ದರೂ, ಜನವರಿ 4 ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿನ ಅರಣ್ಯ ಪ್ರದೇಶದಿಂದ ಪೊಲೀಸರು ಶ್ರದ್ಧಾ ಅವರ ಕೂದಲು ಮತ್ತು ಮೂಳೆಗಳ ಮಾದರಿಗಳನ್ನು ಕಲೆ ಹಾಕಿದ್ದು, ಅವೇ ಬಲವಾದ ಸಾಕ್ಷ್ಯಾಧಾರಗಳಾಗಿವೆ.
ಪ್ರಕರಣವೇನು?: 2022 ರ ಮೇ ತಿಂಗಳಲ್ಲಿ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ಬಾಡಿಗೆ ಫ್ಲಾಟ್‌ನಲ್ಲಿ ಆಫ್ತಾಬ್ ಪೂನಾವಾಲಾ, ಲಿವ್ಇನ್ ಗೆಳತಿ ಶ್ರದ್ಧಾ ವಾಕರ್‌ಳನ್ನು ಕತ್ತು ಹಿಸುಕಿ ಕೊಂದಿದ್ದ. ನಂತರ ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಫ್ರೀಜರ್ನಲ್ಲಿ ಸಂಗ್ರಹಿಸಿಟ್ಟಿದ್ದ. ಕೊಲೆ ಮಾಡಿದ್ದು ಗೊತ್ತಾಗಬಾರದು ಎಂದು ದಿನವೂ ಒಂದೊಂದೇ ತುಂಡನ್ನು ಮೆಹ್ರೌಲಿಯ ಕಾಡು, ನಿರ್ಜನ ಪ್ರದೇಶದಲ್ಲಿ ವಿಲೇವಾರಿ ಮಾಡುತ್ತಿದ್ದ.
ಇತ್ತ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದರು. ಕೊಲೆ ನಡೆದು ಸುಮಾರು ಐದು ತಿಂಗಳ ನಂತರ ಶ್ರದ್ಧಾ ವಾಲ್ಕರ್ ಕೊಲೆಯಾಗಿದ್ದು, ಬೆಳಕಿಗೆ ಬಂದಿತ್ತು. ಅಂತೆಯೇ, ನವೆಂಬರ್ 12ರಂದು ಹಂತಕ ಅಫ್ತಾಬ್ನನ್ನು ಬಂಧಿಸಲಾಗಿತ್ತು.
ಶ್ರದ್ಧಾ ಕೊಲೆಯಾದ ರಾತ್ರಿಯಿಡೀ ಆರೋಪಿ ಫ್ತಾಬ್ ಪೂನಾವಾಲಾ ಗಾಂಜಾ ಸೇದಿದ್ದ. ಅದೇ ಅಮಲಿನಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಸಾಯಿಸಿದ್ದ. ಇದಾದ ನಂತರವೂ ಆರೋಪಿ ಆಕೆ ಶವದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಗಾಂಜಾ ಸೇದಿದ್ದ. ಇದಾದ ಬಳಿಕ ಬೆಳಗ್ಗೆ ರೆಫ್ರಿಜರೇಟರ್ ಮತ್ತು ಗರಗಸ ತಂದು ಮೃತದೇಹವನ್ನು ತುಂಡರಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಎಂಬ ಅಂಶಗಳು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದ್ದವು. ಶ್ರದ್ಧಾ ಹಂತಕ ಆಫ್ತಾಬ್ ಪೂನಾವಾಲಾಗೆ ಪಾಲಿಗ್ರಾಫ್, ನಾರ್ಕೊ ಪರೀಕ್ಷೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ.
ಓದಿ: ಶ್ರದ್ಧಾ ವಾಲ್ಕರ್ ದೇಹ ಕತ್ತರಿಸಲು ಗರಗಸ ಬಳಸಿದ್ದ ಅಫ್ತಾಬ್: ವೈದ್ಯಕೀಯ ಪರೀಕ್ಷೆಯಲ್ಲಿ ದೃಢ