ನವದೆಹಲಿ: ಶ್ರದ್ಧಾ ವಾಲ್ಕರ್ ಭೀಕರ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ಸುಳ್ಳು ಪತ್ತೆ ಪರೀಕ್ಷೆ(ಪಾಲಿಗ್ರಾಫ್)ಯನ್ನು ದೆಹಲಿ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಆರಂಭಿಸಿದ್ದಾರೆ.
ಶ್ರದ್ಧಾ ಮರ್ಡರ್ ಕೇಸ್ನಲ್ಲಿ ಆರೋಪಿ ಅಫ್ತಾಬ್ ಸುಳ್ಳು ಹೇಳಿಕೆ ನೀಡುತ್ತಿರುವ ಕಾರಣ ಅದರ ಪತ್ತೆಗಾಗಿ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅನುಮತಿ ನೀಡಬೇಕು ಎಂದು ತನಿಖಾಧಿಕಾರಿಗಳು ದೆಹಲಿ ಹೈಕೋರ್ಟ್ಗೆ ಮನವಿ ಮಾಡಿದ್ದರು. ಇದಕ್ಕೆ ನ್ಯಾಯಾಲಯ ಇಂದು ಸಮ್ಮತಿಸಿತ್ತು.
ಹೀಗಾಗಿ ಅಫ್ತಾಬ್ನ ಹೇಳಿಕೆಗಳನ್ನು ದೃಢಪಡಿಸಿಕೊಳ್ಳಲು ಅಧಿಕಾರಿಗಳು ಪರೀಕ್ಷೆಗೆ ಮುಂದಾಗಿದ್ದು, ಇದಕ್ಕೂ ಮೊದಲು ಆತನ ಆರೋಗ್ಯ ತಪಾಸಣೆ ನಡೆಸಲಾಯಿತು. ವೈಜ್ಞಾನಿಕ ಆಧಾರದ ಮೇಲೆ ಆತನನ್ನು ಸಿದ್ಧಪಡಿಸಿ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಏನಿದು ಸುಳ್ಳು ಪತ್ತೆ ಪರೀಕ್ಷೆ: ಗಂಭೀರ ಪ್ರಕರಣಗಳಲ್ಲಿ ಮಾತ್ರ ಇದನ್ನು ಪ್ರಯೋಗಿಸಲಾಗುತ್ತದೆ. ಪ್ರಕರಣದ ಆರೋಪಿ ನೀಡುತ್ತಿರುವ ಹೇಳಿಕೆಗಳು ಸತ್ಯವೋ? ಸುಳ್ಳೋ ಎಂಬುದನ್ನು ಆತನ ಉಸಿರಾಟ ಮತ್ತು ಹೃದಯದ ಬಡಿತದ ಮೂಲಕ ಸುಳ್ಳು ಪತ್ತೆ ಯಂತ್ರ ಗ್ರಾಫ್ ಮಾಡುತ್ತದೆ. ಇದನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಲಾಗುತ್ತದೆ.
ಆರೋಪಿಯ ದೇಹದ ವಿವಿಧೆಡೆ ಯಂತ್ರದ ಸಲಕರಣೆಗಳನ್ನು ಅಳವಡಿಸಲಾಗುತ್ತದೆ. ಬಳಿಕ ಚುಚ್ಚುಮದ್ದು ನೀಡಿ ಕೇಸ್ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ವೇಳೆ ಆರೋಪಿ ಉತ್ತರ ನೀಡುವಾಗಿನ ದೇಹಸ್ಥಿತಿ ಮತ್ತು ಮನಸ್ಸಿನ ಮೇಲಾಗುವ ಒತ್ತಡವನ್ನು ಸುಳ್ಳು ಪತ್ತೆ ಯಂತ್ರ ಗುರುತಿಸುತ್ತದೆ. ಇದರ ಆಧಾರದ ಮೇಲೆ ನೀಡಿದ ಹೇಳಿಕೆ ಸುಳ್ಳೋ ಸತ್ಯವೋ ಎಂಬುದನ್ನು ಅಧಿಕಾರಿಗಳು ದೃಢೀಕರಿಸುತ್ತಾರೆ.
ಓದಿ: ಕೋಪದಲ್ಲಿ ಕತ್ತು ಹಿಸುಕಿ ಕೊಂದು 35 ಪೀಸ್ ಮಾಡಿದೆ: ಕೋರ್ಟ್ಗೆ ತಿಳಿಸಿದ ಶ್ರದ್ಧಾ ಹಂತಕ ಅಫ್ತಾಬ್