ಯುಎನ್ : ಭಾರತದಲ್ಲಿ ಕೊರೊನಾ ಪ್ರಕರಣಗಳ ಉಲ್ಬಣವು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ.
ಜೂನ್ ಅಂತ್ಯದ ವೇಳೆಗೆ 190 ಮಿಲಿಯನ್ ಡೋಸ್‌ಗಳ ಕೊರತೆ ಉಂಟಾಗುತ್ತದೆ ಎಂದು ಡಬ್ಲ್ಯುಹೆಚ್‌ಒ, ಯುನಿಸೆಫ್, GAVI ಮತ್ತು ಸಿಇಪಿಐ ತನ್ನ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡ ಹಿನ್ನೆಲೆ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಜೂನ್ ಅಂತ್ಯದ ವೇಳೆಗೆ 190 ಮಿಲಿಯನ್ ಡೋಸ್ ಲಸಿಕೆಗಳ ಕೊರತೆ ಎದುರಾಗಲಿದೆ.
ಈ ಕುರಿತು ಡಬ್ಲ್ಯುಹೆಚ್‌ಒ(ವಿಶ್ವ ಆರೋಗ್ಯ ಸಂಸ್ಥೆ), ಜಾಗತಿಕ ಆರೋಗ್ಯ ಸಹಭಾಗಿತ್ವ ಸಂಸ್ಥೆ GAVI, ಸಾಂಕ್ರಾಮಿಕ ವಿರುದ್ಧದ ಆವಿಷ್ಕಾರಗಳಿಗಾಗಿ ರಚನೆಯಾದ ಸಿಇಪಿಐ ಮೈತ್ರಿಕೂಟ ಜಂಟಿಯಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿವೆ.
ಕೋವಿಡ್ ಲಸಿಕೆ ಅಭಿಯಾನವನ್ನು ತ್ವರಿತಗತಿಯಲ್ಲಿ ಕೈಗೊಂಡ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿವೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಸಹ ಕಡಿಮೆಯಾಗಿದೆ. ಆದರೂ ಜಾಗತಿಕವಾಗಿ ವಿಶ್ಲೇಷಣೆ ಮಾಡಿದಾಗ ಇನ್ನೂ ಆತಂಕಕಾರಿ ಪರಿಸ್ಥಿತಿ ಇದೆ ಎಂದು ತಿಳಿಸಿವೆ.
ದಕ್ಷಿಣ ಏಷ್ಯಾದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಇದು ಜಗತ್ತಿನಾದ್ಯಂತ ಲಸಿಕೆ ಪೂರೈಕೆ ಮೇಲೆ ತೀವ್ರ ಪರಿಣಾಮ ಬೀರಲು ಕಾರಣವಾಗಿದೆ. ಹೀಗಾಗಿಯೇ, ಭಾರತದಲ್ಲಿ ಲಸಿಕೆ ಪೂರೈಕೆ ವ್ಯತ್ಯಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶ್ರೀಮಂತ ರಾಷ್ಟ್ರಗಳು ಲಸಿಕೆಯನ್ನು ಹಂಚಿಕೊಳ್ಳಬೇಕು. ಈಗಾಗಲೇ ಅಮೆರಿಕ ಮತ್ತು ಯೂರೋಪ್ನ ಹಲವು ರಾಷ್ಟ್ರಗಳು 18 ಕೋಟಿ ಡೋಸ್ ಹಂಚಿಕೊಳ್ಳುವುದಾಗಿ ಘೋಷಿಸಿವೆ.
ಆದರೆ, ಇನ್ನೂ ಹೆಚ್ಚಿನ ಸಂಖ್ಯೆಯ ಲಸಿಕೆ ಅವಶ್ಯಕತೆ ಇರುವುದರಿಂದ ಕನಿಷ್ಠ 100 ಕೋಟಿ ಡೋಸ್ಗಳನ್ನು ಶ್ರೀಮಂತ ರಾಷ್ಟ್ರಗಳು ವಿತರಿಸಬೇಕೆಂದು ಮನವಿ ಮಾಡಲಾಗಿದೆ.