ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಮಣಿಹಿಲ್ ಬಟಪುರ ಪ್ರದೇಶದಲ್ಲಿ ಮಧ್ಯರಾತ್ರಿ ಪ್ರಾರಂಭವಾದ ಎನ್‌ಕೌಂಟರ್‌ನಲ್ಲಿ ಲಷ್ಕರ್- ಇ- ತೊಯಿಬಾ ಸಂಘಟನೆಯ ನಾಲ್ವರು ಉಗ್ರರು ಹತರಾಗಿದ್ದಾರೆ. ಈ ವೇಳೆ ಓರ್ವ ಯೋಧ ಗಾಯಗೊಂಡಿದ್ದಾರೆ.
ಈ ಹಿಂದೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿ ಬಂದ ನಂತರ, ಭದ್ರತಾ ಪಡೆಗಳು ಜಿಲ್ಲೆಯ ಮಣಿಹಿಲ್ ಬಟಾಪುರಾ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ನಡೆಸಿದವು. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಮುಂದಾಗಿದ್ದರು. ಇನ್ನು ಈ ವೇಳೆಗಾಗಲೇ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಇದನ್ನು ಓದಿ: ಪ್ರಯಾಣಿಕರ ಗಮನಕ್ಕೆ: ಮಾ. 28ರವರೆಗೆ ಮೆಜೆಸ್ಟಿಕ್ ಟು ಮೈಸೂರು ರಸ್ತೆ ಮೆಟ್ರೋ ಸ್ಥಗಿತ
ಸ್ಥಳೀಯರ ಪ್ರಕಾರ, "ಸೇನೆಯ 34 ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್‌ನ 178 ನೇ ಬೆಟಾಲಿಯನ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ರಾತ್ರಿ 9.30 ರ ಸುಮಾರಿಗೆ ಮಣಿಹಿಲ್ ಬಟಾಪುರ ಇಮಾಮ್ ಸಾಹಿಬ್ ಪ್ರದೇಶದಲ್ಲಿ ಸುತ್ತುವರೆದು, ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಮನೆ-ಮನೆಗೆ ತೆರಳಿ ಶೋಧ ಕಾರ್ಯಾಚರಣೆಯ ನಡೆಸುತ್ತಿದ್ದ ಸಮಯದಲ್ಲಿ, ಉಗ್ರರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಗುಂಡಿನ ಚಕಮಕಿ ಪ್ರಾರಂಭವಾಯಿತು" ಎಂದಿದ್ದಾರೆ.
ಈ ಪ್ರದೇಶದಲ್ಲಿ ಮೂರರಿಂದ ನಾಲ್ಕು ಉಗ್ರರು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ ಮನೆಯಲ್ಲಿ ಅಡಗಿಕೊಂಡಿದ್ದ ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ಈ ದಾಳಿಗೆ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭದ್ರತಾ ಪಡೆಗಳ ಗುಂಡಿನ ದಾಳಿಗೆ ಅಲ್ಲಿದ್ದ ನಾಲ್ವರೂ ಉಗ್ರರು ಹತರಾಗಿದ್ದು, ಇದೀಗ ಕಾರ್ಯಾಚರಣೆ ಸ್ಥಗಿತಗೊಂಡಿದೆ.