ತಿರುವನಂತಪುರಂ: ಅಫ್ಘಾನಿಸ್ತಾನದ ಜೈಲಿನಲ್ಲಿ ನನ್ನ ಮಗಳಿದ್ದು, ಅವಳನ್ನು ಮರಳಿ ನಮ್ಮ ದೇಶಕ್ಕೆ ಕರೆ ತರಲು ಭಾರತ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಐಎಸ್ ಸಂಘಟನೆಗೆ ಸೇರಿರುವ ಭಯೋತ್ಪಾದಕನ ಪತ್ನಿ ಪ್ರತಿಕ್ರಿಯಿಸಿದ್ದಾರೆ.
ನನ್ನ ಮಗಳನ್ನು ಭಾರತಕ್ಕೆ ಕಳಿಸಲು ಆಫ್ಘನ್ ಸರ್ಕಾರ ಇಚ್ಛಿಸಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಬಿಂದು ಸಂಬತ್ ಆರೋಪಿಸಿದ್ದಾರೆ. ನಿಮಿಷಾ ಭಾರತೀಯ ಪ್ರಜೆ, ಅವಳಿಗಿನ್ನೂ ದೇಶದ ಪೌರತ್ವವಿದೆ. ಅವಳನ್ನು ಕರೆ ತಂದು ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾ ಪ್ರಜೆಗಳ ಬಂಧನ ಕೇಸ್: ತನಿಖೆಗಾಗಿ ಮಂಗಳೂರಿಗೆ ಆಗಮಿಸಿದ ತಮಿಳುನಾಡು ಪೊಲೀಸ್ ತಂಡ
ಸೆಪ್ಟೆಂಬರ್ 11 ರಂದು ಯುಎಸ್ ಸೈನ್ಯವು ಅಫ್ಘಾನಿಸ್ತಾನದಿಂದ ಹಿಂದೆ ಸರಿಯುತ್ತದೆ. ಹೀಗಾಗಿ ಆಫ್ಘನ್ ತಾಲಿಬಾನ್ನ ಭದ್ರಕೋಟೆಯಾಗಲಿದ್ದು, ನನ್ನ ಮಗಳ ಹತ್ಯೆಯಾಗುವ ಸಾಧ್ಯತೆಯಿದೆ ಎಂದು ಬಿಂದು ಆತಂಕ ವ್ಯಕ್ತಪಡಿಸಿದ್ದಾರೆ. ನಿಮಿಷ ಫಾತಿಮಾಳನ್ನು ಭಾರತಕ್ಕೆ ಕರೆ ತರಲು ಕೇರಳ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೇರಳ ಮೂಲದ ಮಹಿಳೆಯರು ಆಫ್ಘನ್ ಜೈಲು ಸೇರಿದ್ದು ಹೇಗೆ?
ಕೇರಳ ಮೂಲದ ನಾಲ್ವರು ಮಹಿಳೆಯರು ಇಸ್ಲಾಮಿಕ್ ಸ್ಟೇಟ್ (IS) ಸೇರಲು 2016 ರಿಂದ 18ರ ಅವಧಿಯಲ್ಲಿ ತಮ್ಮ ಗಂಡಂದಿರೊಂದಿಗೆ ಅಫ್ಘಾನಿಸ್ತಾನದ ನಂಗಹಾರ್‌ಗೆ ಪ್ರಯಾಣ ಮಾಡಿದ್ದರು. ದಾಳಿಯೊಂದರಲ್ಲಿ ಈ ನಾಲ್ವರು ಪತಿಯರ ಕೊಲೆಯಾಗಿದೆ. 2019 ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅಫ್ಘಾನಿಸ್ತಾನ ಅಧಿಕಾರಿಗಳ ಮುಂದೆ ಶರಣಾದ ಸಾವಿರಾರು ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರಲ್ಲಿ ಈ ನಾಲ್ವರು ಮಹಿಳೆಯರೂ ಸೇರಿದ್ದಾರೆ.
ಏಪ್ರಿಲ್ 27 ರಂದು ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮುಖ್ಯಸ್ಥ ಅಹ್ಮದ್ ಜಿಯಾ ಸರಜ್ ಕಾಬೂಲ್‌ನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡುತ್ತಾ, 13 ದೇಶಗಳಿಂದ ಇಸ್ಲಾಮಿಕ್ ಸ್ಟೇಟ್ ನ 408 ಸದಸ್ಯರನ್ನು ಅಫ್ಘಾನಿಸ್ತಾನ ಕಾರಾಗೃಹಗಳಲ್ಲಿ ಬಂಧಿತರಾಗಿದ್ದಾರೆ ಎಂದು ತಿಳಿಸಿದ್ದರು. ಈ ಪೈಕಿ ನಾಲ್ವರು ಭಾರತೀಯರು ಇದ್ದಾರೆಂದು ಮಾಹಿತಿ ನೀಡಿದ್ದರು.
ನಾಲ್ಕು ಮಹಿಳೆಯರು ಹಿಂದಿರುಗುವ ಬಗ್ಗೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಒಮ್ಮತವಿಲ್ಲ. ನಾಲ್ವರಿಗೂ ಮರಳುವ ಯಾವುದೇ ಅವಕಾಶವಿಲ್ಲ ಎಂದು ಮೂಲವೊಂದು ತಿಳಿಸಿದೆ.
ಮಾರ್ಚ್ 2020 ರಲ್ಲಿ, ವೆಬ್‌ಸೈಟ್ ಒಂದರಲ್ಲಿ ಮೂವರು ಮಹಿಳೆಯರನ್ನು ವಿಚಾರಣೆ ಮಾಡುವ ವೀಡಿಯೊವನ್ನು ಪ್ರಕಟಿಸಲಾಗಿದೆ. ವೀಡಿಯೊದಲ್ಲಿ ಕಾಣಿಸಿಕೊಂಡ ನಾಲ್ವರು ಮಹಿಳೆಯರನ್ನು ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯಿಷಾ, ರಾಫೆಲಾ, ಮೆರಿನ್ ಜಾಕೋಬ್ ಅಲಿಯಾಸ್ ಮರಿಯಮ್ಮ ಮತ್ತು ನಿಮಿಷಾ ಅಲಿಯಾಸ್ ಫಾತಿಮಾ ಇಸಾ ಎಂದು ಗುರುತಿಸಲಾಗಿದೆ.
ನಾಲ್ವರಿಗೂ ಹಿಂದಿರುಗಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಆದರೆ ಆ ನಾಲ್ವರ ಸಂದರ್ಶನವನ್ನು ನೋಡಿದಾಗ ಅವರು ಸಂಪೂರ್ಣವಾಗಿ ಭಯೋತ್ಪಾದನಾ ಸಿದ್ದಾಂತಕ್ಕೆ ಬದ್ದರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ನಾವು ಫ್ರಾನ್ಸ್ ಮಾದರಿಯನ್ನು ಅನುಸರಿಸಬಹುದು ಮತ್ತು ಅಫ್ಘಾನಿಸ್ತಾನ ಅಧಿಕಾರಿಗಳಲ್ಲಿ ಈ ನಾಲ್ವರ ವಿಚಾರಣೆ ನಡೆಸಲು ಕೋರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.