ಮುಂಬೈ: ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಪತ್ರ ಬರೆಯುವ ಮುಖೇನ ಮನವಿ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಪಕ್ಷದ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ, ಥಾಣೆ ಜಿಲ್ಲೆಯ ಶಾಸಕ ಪ್ರತಾಪ್ "ನಾವು ನಿಮ್ಮನ್ನು ಮತ್ತು ನಿಮ್ಮ ನಾಯಕತ್ವವನ್ನು ನಂಬುತ್ತೇವೆ, ಆದರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ನೀವು ಪ್ರಧಾನಿ ಮೋದಿಗೆ ಹತ್ತಿರವಾಗುವುದು ಉತ್ತಮ ಎಂದು ನಾನು ನಂಬುತ್ತೇನೆ...ನಾವು ಮತ್ತೊಮ್ಮೆ ಒಗ್ಗೂಡಿದರೆ ಅದು ಪಕ್ಷ ಮತ್ತು ಕಾರ್ಯಕರ್ತರಿಗೆ ಪ್ರಯೋಜನಕಾರಿಯಾಗಿದೆ" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಅಭಿಮನ್ಯು ಅಥವಾ ಕರ್ಣರಂತೆ ತಮ್ಮನ್ನು ತಾವು ತ್ಯಾಗ ಮಾಡುವ ಬದಲು ಅರ್ಜುನನಂತೆ ಯುದ್ಧದಲ್ಲಿ ಹೋರಾಡುತ್ತೇನೆ. ನಮ್ಮ ನಾಯಕರು ಅಥವಾ ನಮ್ಮ ಸರ್ಕಾರದಿಂದ ಯಾವುದೇ ಸಹಾಯ ಪಡೆಯದೆ ಕಳೆದ ಏಳು ತಿಂಗಳಿಂದ ನನ್ನ ಕಾನೂನು ಹೋರಾಟ ನಡೆಸುತ್ತಿದ್ದೇನೆ ಎಂದು ಸರ್ನಾಯಕ್ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ಸರ್ನಾಯಕ್ಗೆ ಸಂಬಂಧಿಸಿದ ಜಾಗಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ದಾಳಿ ನಡೆಸಿತ್ತು. ಶಿವಸೇನೆ ಈ ದಾಳಿಯನ್ನು ರಾಜಕೀಯ ಹಗೆತನ ಎಂದು ಆರೋಪಿಸಿದ್ದಾರೆ.