ಮುಂಬೈ: ಎನ್‌ಡಿಎ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರನ್ನು ಪಕ್ಷವು ಬೆಂಬಲಿಸುವಂತೆ ಶಿವಸೇನಾ ಸಂಸದರು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಸೋಮವಾರವಷ್ಟೇ ಮನವಿ ಮಾಡಿದ್ದರು. ಅದಾಗಿ ಒಂದು ದಿನದ ನಂತರ ಇಂದು ಎನ್‌ಡಿಎ ಅಭ್ಯರ್ಥಿಯನ್ನೇ ಶಿವಸೇನೆ ಬೆಂಬಲಿಸುವ ಸಾಧ್ಯತೆಗಳಿರುವುದಾಗಿ ತಿಳಿದು ಬಂದಿದೆ.
"ತನಗೆ ಯಾವುದು ಸರಿ ಕಾಣಿಸುತ್ತದೆಯೋ ಅದನ್ನೇ ಶಿವಸೇನೆ ಮಾಡುತ್ತದೆ. ಈ ಹಿಂದೆಯೂ ನಾವು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಟಿ.ಎನ್.ಶೇಷನ್ ಮತ್ತು ಯುಪಿಎ ಅಭ್ಯರ್ಥಿಯಾಗಿದ್ದ ಪ್ರತಿಭಾ ಪಾಟೀಲ ಮತ್ತು ಪ್ರಣಬ್ ಮುಖರ್ಜಿ ಅವರನ್ನು ಬೆಂಬಲಿಸಿದ್ದೆವು. ರಾಜಕೀಯದ ಆಚೆಗೂ ಕೆಲಸ ಮಾಡುವ ಸಂಪ್ರದಾಯವನ್ನು ಶಿವಸೇನೆ ಹೊಂದಿದೆ. ರಾಷ್ಟ್ರಹಿತದ ಪ್ರಶ್ನೆ ಬಂದಾಗ ನಾವು ಜನತೆಯನ್ನು ಬೆಂಬಲಿಸುತ್ತೇವೆ." ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಮಾಧ್ಯಮಗಳಿಗೆ ತಿಳಿದ್ದಾರೆ.
ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡಲು ಶಿವಸೇನೆ ಸಿದ್ಧತೆ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾವುತ್, ಈ ಸಂಬಂಧ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದ್ದಾರೆ. ಇಂದು ಅಥವಾ ನಾಳೆ, ನೀವು ನಿರ್ಧಾರವನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ಸೋಮವಾರ ಉದ್ಧವ್ ಠಾಕ್ರೆ ಕರೆದಿದ್ದ ಸಭೆಯಲ್ಲಿ, ಪಕ್ಷವು ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬೇಕು ಎಂದು ಬಹುಪಾಲು ಸಂಸದರು ಹೇಳಿದ್ದರು. ಏಕನಾಥ್ ಶಿಂಧೆ ಅವರ ಪುತ್ರ ಮತ್ತು ಭಾವನಾ ಗವಳಿ ಈ ಇಬ್ಬರು ಸಂಸದರು ಮಾತ್ರ ಸಭೆಯಲ್ಲಿ ಹಾಜರಿರಲಿಲ್ಲ ಎಂದು ರಾವತ್ ಹೇಳಿದರು. ಇದಕ್ಕೂ ಮುನ್ನ, ಶಿವಸೇನಾ ಸಂಸದ ರಾಹುಲ್ ಶೆವಾಲೆ ಅವರು ಮುರ್ಮು ಅವರಿಗೆ ಬೆಂಬಲ ನೀಡುವಂತೆ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದರು.