ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ತಾಪ ಏರತೊಡಗಿದೆ. ದಹಿಸರ್‌ನಲ್ಲಿ ನಡೆದ ಶಿವಸೇನೆ ರ್‍ಯಾಲಿಗೆ ಮಾರ್ಗದರ್ಶನ ನೀಡುತ್ತಿದ್ದ ಶಿವಸೇನೆ ಮುಖಂಡ ಸಂಜಯ್ ರಾವುತ್ 40 ಶಾಸಕರ(ಬಂಡಾಯ ಶಾಸಕರು) ಪಾರ್ಥಿವ ಶರೀರ ನೇರವಾಗಿ ಗುವಾಹಟಿಯಿಂದ ಬರಲಿವೆ ಎಂದು ಭಾನುವಾರ ಹೇಳಿದ್ದರು. ಈ ಕುರಿತು ಇಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಬಂಡಾಯ ಶಾಸಕರ ಶರೀರಗಳನ್ನು ಶವಾಗಾರಕ್ಕೆ ಕಳುಹಿಸುತ್ತೇವೆ ಎಂದು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಂಜಯ್ ರಾವುತ್ ಪ್ರತಿಕ್ರಿಯಿಸಿದ್ದಾರೆ. ಅವರ ಆತ್ಮ ಸತ್ತಿದೆ. ಅವರು ಮಾತ್ರ ಜೀವಂತವಾಗಿದ್ದಾರೆಂದು ನಾನು ಹೇಳಿದ್ದು. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಯೂಟರ್ನ್ ಹೊಡೆದಿದ್ದಾರೆ.
ದೀಪಕ್ ಕೇಸರ್ಕರ್ ನಮಗೆ ಆತ್ಮೀಯರಾಗಿದ್ದರು. ಉದಯ್ ಸಮಂತ್ ಸಹ ನಮಗೆ ಆಪ್ತರಾಗಿದ್ದರು. ಗುವಾಹಟಿಗೆ ಹೋದವರೆಲ್ಲ ನಮಗೆ ಆಪ್ತರು. ಏಕನಾಥ್ ಶಿಂದೆ ಕೂಡ ನಮಗೆ ಹತ್ತಿರವಾಗಿದ್ದರು. ಇದು ಕಾನೂನಿನ ಹೋರಾಟ. ಬೀದಿಯಲ್ಲಿನ ಯುದ್ಧ ಮತ್ತು ಕಾನೂನಿನ ಯುದ್ಧವು ಮುಂದುವರಿಯುತ್ತದೆ ಎಂದು ರಾವುತ್ ತಿಳಿಸಿದರು.
ಇದನ್ನೂ ಓದಿ: ಮಹಾ ರಾಜಕೀಯ ಬಿಕ್ಕಟ್ಟು: ಸುಪ್ರೀಂನಲ್ಲಿ 16 ಅತೃಪ್ತ ಶಾಸಕರ ಅರ್ಜಿ