ಮುಂಬೈ (ಮಹಾರಾಷ್ಟ್ರ): ಶಿವಸೇನಾ ಮುಖಂಡ ಕಿಶೋರ್ ತಿವಾರಿ ಆರ್ಯನ್ ಖಾನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆರ್ಯನ್ ಖಾನ್ ಬಂಧನಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಅಧಿಕಾರಿಗಳ ಕಾರ್ಯದಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಬೇಕು ಎಂದು ಕಿಶೋರ್ ತಿವಾರಿ ಮನವಿ ಮಾಡಿದ್ದಾರೆ.
ಕಿಶೋರ್ ತಿವಾರಿ ಮಾನವ ಹಕ್ಕುಗಳನ್ನು ರಕ್ಷಿಸಲು ಮತ್ತು ಅಧಿಕಾರದ ದುರುಪಯೋಗ ನಿಲ್ಲಿಸಲು ಎನ್‌ಸಿಬಿ ವಿರುದ್ಧ ದೂರು ದಾಖಲಿಸಿದ್ದಾರೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕಿಶೋರ್ ತಿವಾರಿ ಅವರು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಕೆಲವು ಆರೋಪಗಳನ್ನು ಹೊರಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಚಿತ್ರರಂಗದ ಕೆಲವು ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಮುಂಬೈನ ಎನ್‌ಸಿಬಿ ದಾಳಿ ನಡೆಸುತ್ತಲೇ ಇದೆ. ಈ ಕುರಿತು ವಿಶೇಷ ನ್ಯಾಯಾಂಗ ತನಿಖೆ ನಡೆಸಲು ಕೋರ್ಟ್ ಆದೇಶಿಸಬೇಕೆಂದು ಕೋರುತ್ತೇನೆ ಎಂದು ಕಿಶೋರ್ ತಿವಾರಿ ಮನವಿ ಮಾಡಿದ್ದಾರೆ.
ಎನ್ಸಿಬಿಯ ವ್ಯವಹಾರಗಳು ಹಾಗೂ ಅದರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಮೂಲ ಹಕ್ಕುಗಳನ್ನು ರಕ್ಷಿಸುವಂತೆ ಅವರು ಮನವಿ ಮಾಡಿದ್ದಾರೆ.