ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಬಣವು ಮಂಗಳವಾರ (ಅಕ್ಟೋಬರ್ 11) ಭಾರತೀಯ ಚುನಾವಣಾ ಆಯೋಗಕ್ಕೆ ತನ್ನ ಪಕ್ಷಕ್ಕಾಗಿ ಮೂರು ಹೊಸ ಪಕ್ಷದ ಚಿಹ್ನೆ ಆಯ್ಕೆಗಳನ್ನು ಸಲ್ಲಿಸಿದೆ. 'ಹೊಳೆಯುತ್ತಿರುವ ಸೂರ್ಯ', 'ಗುರಾಣಿ ಮತ್ತು ಕತ್ತಿ' ಮತ್ತು 'ಆಲದ ಮರ' ಇವೇ ಮೂರು ಚಿಹ್ನೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಇದಕ್ಕೂ ಮುನ್ನ ಸೋಮವಾರ ಏಕನಾಥ್ ಶಿಂಧೆ ಅವರ ಪಕ್ಷವನ್ನು ‘ಬಾಳಾಸಾಹೆಬಾಂಚಿ ಶಿವಸೇನೆ’ ಎಂದು ಮರುನಾಮಕರಣ ಮಾಡಿದ್ದರು.
ಮತ್ತೊಂದೆಡೆ ಉದ್ಧವ್ ಠಾಕ್ರೆ ಅವರ ಶಿವಸೇನಾ ಬಣವನ್ನು 'ಶಿವಸೇನಾ - ಉದ್ಧವ್ ಬಾಳಾಸಾಹೇಬ್ ಠಾಕ್ರೆ' ಎಂದು ಮರುನಾಮಕರಣ ಮಾಡಲಾಗಿದೆ. ಈ ಬಣಕ್ಕೆ 'ಉರಿಯುತ್ತಿರುವ ಪಂಜು' ಚಿಹ್ನೆ ನೀಡಲಾಗಿದೆ. ಠಾಕ್ರೆ 'ತ್ರಿಶೂಲ್' ಅನ್ನು ಪಕ್ಷದ ಚಿಹ್ನೆಯಾಗಿ ಬೇಕೆಂದು ಸೂಚಿಸಿದ್ದರು. ಆದರೆ, ಧಾರ್ಮಿಕ ಕಾರಣಗಳನ್ನು ಉಲ್ಲೇಖಿಸಿ ಈ ಬೇಡಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು.
ಠಾಕ್ರೆ ಬಣ ಆಯೋಗದ ಆದೇಶವನ್ನು ಸ್ವಾಗತಿಸಿದ್ದು, ಪಕ್ಷದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹೊಸ ಹೆಸರು ಮತ್ತು ಚಿಹ್ನೆಯನ್ನು ಶೇರ್ ಮಾಡಲಾಗುತ್ತಿದೆ. ನಮ್ಮ ಪಕ್ಷಕ್ಕೆ ಹೆಚ್ಚು ಮುಖ್ಯವಾದ ಉದ್ಧವ್ ಜಿ, ಬಾಳಾಸಾಹೇಬ್ ಮತ್ತು ಠಾಕ್ರೆ ಮೂರು ಹೆಸರುಗಳನ್ನು ಹೊಸ ಹೆಸರಿನಲ್ಲಿ ಉಳಿಸಿಕೊಂಡಿರುವುದು ನಮಗೆ ಸಂತೋಷವಾಗಿದೆ ಎಂದು ಠಾಕ್ರೆ ನಿಷ್ಠಾವಂತ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಭಾಸ್ಕರ್ ಜಾಧವ್ ಹೇಳಿದ್ದಾರೆ.
ಇದನ್ನೂ ಓದಿ: ಅಂಧೇರಿ ಈಸ್ಟ್ ಉಪಚುನಾವಣೆ: ಶಿವಸೇನೆ ಪಕ್ಷದ ಚಿನ್ಹೆ ಹೆಸರು ಬಳಕೆ ಸ್ಥಗಿತ ಮಾಡಿ ಚುನಾವಣಾ ಆಯೋಗ ಆದೇಶ