ನವದೆಹಲಿ: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ 'ಆಪರೇಷನ್ ಗಂಗಾ' ಕಾರ್ಯಾಚರಣೆ ಕೈಗೊಂಡು, ತನ್ನ ಪ್ರಜೆಗಳನ್ನು ರಕ್ಷಣೆ ಮಾಡಿದೆ. ಈ ವೇಳೆ ಉಕ್ರೇನ್ನ ಸುಮಿಯಲ್ಲಿ ಸಿಲುಕಿದ್ದ ಬಾಂಗ್ಲಾದೇಶದ 9 ನಾಗರಿಕರನ್ನು ರಕ್ಷಿಸಿದ್ದಕ್ಕೆ ಪ್ರಧಾನಿ ಶೇಖ್ ಹಸೀನಾ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಉಕ್ರೇನ್ನ ಈಶಾನ್ಯ ನಗರವಾದ ಸುಮಿಯಲ್ಲಿ ಸಿಲುಕಿದ್ದ 694 ಭಾರತೀಯರನ್ನು ಭಾರತ ಸರ್ಕಾರ ಬಸ್ಗಳ ಮೂಲಕ ಅವರನ್ನು ಪೋಲ್ಟವಾಗೆ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿತ್ತು. ಈ ವೇಳೆ ಬಾಂಗ್ಲಾದೇಶದ 9 ನಾಗರಿಕರನ್ನೂ ಕೂಡ ಅಲ್ಲಿಂದ ಸ್ಥಳಾಂತರಿಸಲಾಗಿತ್ತು. ಇದರಿಂದ ತನ್ನ ದೇಶದ ನಾಗರಿಕರ ರಕ್ಷಣೆ ಮಾಡಿದ್ದಕ್ಕಾಗಿ ಶೇಖ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ನಾಳೆ ತಾಯ್ನಾಡಿಗೆ ಉಳಿದ ಭಾರತೀಯರು: ಸುಮಿಯಲ್ಲಿ ಸಿಲುಕಿದ್ದ 694 ಭಾರತೀಯರನ್ನು ಸುರಕ್ಷಿತ ಪ್ರದೇಶವಾದ ಪೋಲ್ಟವಾಗೆ ಮಂಗಳವಾರ ಕರೆತರಲಾಗಿದೆ. ಗುರುವಾರ ಅವರನ್ನು ಪೋಲೆಂಡ್ನಿಂದ ಭಾರತಕ್ಕೆ ಮರಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ ಯುದ್ಧಭೂಮಿಯಲ್ಇ ಸಿಲುಕಿರುವ ತಮ್ಮ ನಾಗರಿಕರ ರಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದರು. ಇದರಂತೆ ಉಕ್ರೇನ್ನ ಕೀವ್, ಸುಮಿ, ಖಾರ್ಕಿವ್ ಮತ್ತು ಮರಿಯುಪೋಲ್‌ನಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ಬಳಿಕ 'ಮಾನವೀಯ ಕಾರಿಡಾರ್'ಗಳನ್ನು ಒದಗಿಸಲಾಗಿದೆ.
ಅದಾದ ಬಳಿಕ ಅಲ್ಲಿನ ಭಾರತದ ರಾಯಭಾರಿ ಕಚೇರಿಯು ಉಕ್ರೇನ್ನ ಯಾವುದೇ ಭಾಗದಲ್ಲಿ ಸಿಲುಕಿರುವ ಭಾರತೀಯರು ಲಭ್ಯವಿರುವ ಯಾವುದೇ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣವೇ ದೇಶ ತೊರೆಯಲು ಸೂಚಿಸಿದೆ.
ಇನ್ನು ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರುವ ನಿಟ್ಟಿನಲ್ಲಿ ವಿವಿಧ ದೇಶಗಳೊಂದಿಗೆ ಸಮನ್ವಯ ಸಾಧಿಸಲು ನೇಮಕ ಮಾಡಿದ್ದ ಕೇಂದ್ರ ಸಚಿವರಲ್ಲಿ ಹರ್ದೀಪ್ ಸಿಂಗ್ ಪುರಿ ಮತ್ತು ಜನರಲ್ ವಿ.ಕೆ. ಸಿಂಗ್ ಅವರು ದೇಶಕ್ಕೆ ಮರಳಿದ್ದಾರೆ. ಉಳಿದ ಇಬ್ಬರು ಸಚಿವರಾದ ಕಿರಣ್ ರಿಜಿಜು ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಾಕಿಯಿರುವ ಭಾರತೀಯ ಪ್ರಜೆಗಳ ಸ್ಥಳಾಂತರಿಸುವಿಕೆಯ ಮೇಲ್ವಿಚಾರಣೆ ಮಾಡಲು ಸ್ಲೋವಾಕಿಯಾ ಮತ್ತು ರೊಮೇನಿಯಾದಲ್ಲಿ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ: ತೆರಿಗೆ ರದ್ದುಗೊಳಿಸಿ ಚಿನ್ನದ ಬೆಲೆ ಇಳಿಸಿದ ರಷ್ಯಾ: ಪುಟಿನ್ ನಿರ್ಧಾರದ ಉದ್ದೇಶವೇನು?