ಪಾಟ್ನಾ/ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ, ಇತರೆ ಪಕ್ಷಗಳ ನಾಯಕರು ಮಮತಾ ಬ್ಯಾನರ್ಜಿ ತಂಡಕ್ಕೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ರಾಯ್ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಇದೀಗ ಕಾಂಗ್ರೆಸ್ನ ಹಿರಿಯ ಮುಖಂಡ ಶತ್ರಘ್ನ ಸಿನ್ಹಾ ಟಿಎಂಸಿ ಸೇರಲಿದ್ದಾರೆ ಎಂಬ ಸುದ್ದಿ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಇತ್ತೀಚೆಗಷ್ಟೇ ಸಿನ್ಹಾ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ಹಾಗಾಗಿ ಅವರು ಬಿಜೆಪಿಗೆ ಸೇರಲಿದ್ದು, ಭಾರತೀಯ ಜನತಾ ಪಕ್ಷದಲ್ಲಿ ಅತ್ಯುನ್ನತ ಹುದ್ದೆ ಸಿಗಬಹುದೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಆದರೆ, 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ, ಮೋದಿಯ ಪ್ರಬಲ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದ್ದು, ದೀದಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗ್ತಿದೆ.
ಈ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಿನ್ಹಾ, ನಾನು ಏನನ್ನೂ ಹೇಳುವುದಿಲ್ಲ. ಆದರೆ, ರಾಜಕೀಯ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ಇತ್ತ ಟಿಎಂಸಿ ನಾಯಕರು ಈ ಬಗ್ಗೆ ಮಾತನಾಡಿದ್ದು, ಸಿನ್ಹಾ ಅವರ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಹಾಗೂ ಶತ್ರುಘ್ನ ಸಿನ್ಹಾ ನಡುವಿನ ರಾಜಕೀಯ ಬಾಂಧವ್ಯ ಚೆನ್ನಾಗಿದೆ ಎಂದಿದ್ದಾರೆ. ಜುಲೈ 21 ರಂದು ಸಿನ್ಹಾ ತೃಣಮೂಲ ಕಾಂಗ್ರೆಸ್ಗೆ ಸೇರುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಿಹಾರಿ ಬಾಬು ಎಂದೇ ಜನಪ್ರಿಯವಾಗಿರುವ ಸಿನ್ಹಾ, ಇತ್ತೀಚೆಗೆ ಮುಕ್ತಾಯಗೊಂಡ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರನ್ನು 'ನಿಜವಾದ ರಾಯಲ್ ಬಂಗಾಳ ಹುಲಿ' ಎಂದು ಕರೆದಿದ್ದರು.
ಇದನ್ನೂ ಓದಿ:ಕೈ ಕೊಟ್ಟಿರುವ ಸಮುದಾಯದ ಮತದಾರರನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ ಏನು ಗೊತ್ತಾ?
ಪಾಟ್ನಾದ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಸಂಸದರಾಗಿದ್ದ ಸಿನ್ಹಾ, ಬಳಿಕ ಕಾಂಗ್ರೆಸ್ ಸೇರಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ರು.