ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡಿರುವ 12 ಪ್ರತಿಪಕ್ಷಗಳ ಸಂಸದರಿಗೆ ಬೆಂಬಲ, ಒಗ್ಗಟ್ಟು ಸೂಚಿಸುವ ಸಲುವಾಗಿ ಸಂಸದ್ ಟಿವಿಯ ಟಾಕ್ ಶೋ ನಡೆಸಿಕೊಡಲು ಕಾಂಗ್ರೆಸ್ ಸಂಸದ ಶಶಿ ತರೂರ್ ನಿರಾಕರಿಸಿದ್ದಾರೆ. ಹಾಗೆಯೇ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ನಿರೂಪಕಿ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಲೋಕಸಭಾ ಟಿವಿ ಹಾಗೂ ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ ಕಳೆದ ಸೆಪ್ಟೆಂಬರ್ನಲ್ಲಿ 'ಸಂಸದ್ ಟಿವಿ'ಯನ್ನು ಸಂಸದೀಯ ವ್ಯವಸ್ಥೆಗೆ ಹೊಸ ಸಂವಹನ ಮಾಧ್ಯಮವಾಗಿ ಲೋಕಾರ್ಪಣೆ ಮಾಡಲಾಗಿತ್ತು. ಸಂಸದ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಟು ದಿ ಪಾಯಿಂಟ್' ಟಾಕ್ ಶೋ ಅನ್ನು ಶಶಿ ತರೂರ್ ನಡೆಸಿಕೊಡುತ್ತಿದ್ದರು. ಅನೇಕ ಕಾರ್ಯಕ್ರಮಗಳಿಗೆ ಪ್ರಿಯಾಂಕಾ ಚತುರ್ವೇದಿ ನಿರೂಪಕಿಯಾಗಿದ್ದರು.
ಇದನ್ನೂ ಓದಿ: 'ಲೋಕಸಭೆ ಕೆಲಸ ಮಾಡಲು ಆಕರ್ಷಕ ತಾಣವಲ್ಲ ಅಂತ ಯಾರು ಹೇಳ್ತಾರೆ?' ತರೂರ್‌ಗೆ ನೆಟ್ಟಿಗರ ಚಾಟಿ, ಕ್ಷಮೆಯಾಚನೆ
ನವೆಂಬರ್ 29ರಿಂದ ಚಳಿಗಾಲದ ಸಂಸತ್ ಅಧಿವೇಶನ ಆರಂಭವಾಗಿದ್ದು, ಅಂದೇ 'ಕೃಷಿ ಕಾನೂನುಗಳ ರದ್ದತಿ ಮಸೂದೆ 2021'ಯನ್ನು ಪಾರ್ಲಿಮೆಂಟ್ ಅಂಗೀಕರಿಸಿತ್ತು. ಯಾವುದೇ ಚರ್ಚೆ ಮಾಡದೇ ಮಸೂದೆ ಅಂಗೀಕರಿಸಿದ್ದಕ್ಕೆ ಪ್ರತಿಪಕ್ಷಗಳ ಸಂಸದರು ರಾಜ್ಯಸಭೆ ಕಲಾಪದಲ್ಲಿ ಗದ್ದಲ ಉಂಟುಮಾಡಿದ್ದರು. ಈ ಹಿನ್ನೆಲೆ ಪ್ರಿಯಾಂಕಾ ಚತುರ್ವೇದಿ ಸೇರಿ 12 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಲಾಗಿತ್ತು.
ಇದೇ ಕಾರಣಕ್ಕೆ ಪ್ರಿಯಾಂಕಾ ಚತುರ್ವೇದಿ ಅವರು ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶಶಿ ತರೂರ್ ಅವರು ಅಮಾನತುಗೊಂಡ ಸಂಸದರಿಗೆ ಸಾಥ್ ನೀಡುವ ದೃಷ್ಟಿಯಿಂದ ಟಾಕ್ ಶೋ ನಡೆಸಿಕೊಡಲು ನಿರಾಕರಿಸಿದ್ದಾರೆ.