ಪಾಟ್ನಾ/ಮುಂಬೈ: ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಿಂದ ಕೇಂದ್ರದ ಮಾಜಿ ಸಚಿವರಾದ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಕುರಿತು ಇಬ್ಬರು ಹಿರಿಯ ರಾಜಕಾರಣಿಗಳು ಬುಧವಾರ ಮಾಹಿತಿ ನೀಡಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಆಹ್ವಾನ ಬಂದಿದೆ. ಆದರೆ, ಈ ಕಾರ್ಯಕ್ರಮದ ನಂತರ ಮತ್ತು ಮಂದಿರ ನಿರ್ಮಾಣ ಪೂರ್ಣಗೊಂಡ ನಂತರ ಅಯೋಧ್ಯೆಗೆ ಭೇಟಿ ನೀಡುವುದಾಗಿ ಶರದ್ ಪವಾರ್ ತಿಳಿಸಿದ್ದಾರೆ. ಈ ಕುರಿತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಬುಧವಾರ ಪತ್ರ ಬರೆದಿರುವ ಪವಾರ್, ಅಯೋಧ್ಯೆಯಲ್ಲಿ ಜನವರಿ 22ರಂದು ಜರುಗುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಮರ್ಯಾದಾ ಪುರುಷೋತ್ತಮ ಶ್ರೀರಾಮ್ ಭಾರತ ದೇಶಾದ್ಯಂತದ ಮತ್ತು ಕೋಟ್ಯಂತರ ಭಕ್ತರ ಆರಾಧನೆ ಮತ್ತು ಭಕ್ತಿಯ ಸಂಕೇತವಾಗಿದ್ದಾನೆ. ಭಕ್ತರು ಈ ಸಮಾರಂಭದ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯವನ್ನು ತಲುಪುತ್ತಾರೆ. ಐತಿಹಾಸಿಕ ಆಚರಣೆಗಳ ಸಂತಸದಲ್ಲಿ ಇರುತ್ತಾರೆ. ಜ.22ರ ನಂತರ ಅಯೋಧ್ಯೆಗೆ ನಿಗದಿತ ಭೇಟಿಯ ಸಮಯದಲ್ಲಿ ನಾನು ದೇವಾಲಯಕ್ಕೆ ಭೇಟಿ ನೀಡುತ್ತೇನೆ. ಅಷ್ಟರೊಳಗೆ ಮಂದಿರದ ನಿರ್ಮಾಣವೂ ಪೂರ್ಣಗೊಳ್ಳಲಿದೆ. ಜ.22ರಂದು ಸಮಾರಂಭಗಳು ಮುಗಿದ ನಂತರ ಶ್ರೀರಾಮ ಲಲ್ಲಾನ ದರ್ಶನವನ್ನು ಶಾಂತಿಯುತವಾಗಿ ಮತ್ತು ಭಕ್ತಿಯಿಂದ ಮಾಡಬಹುದು. ಅಲ್ಲದೇ, ಆಹ್ವಾನಕ್ಕಾಗಿ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಸಮಾರಂಭದ ಯಶಸ್ಸಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಶರದ್ ಪವಾರ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಂದೆಡೆ, ಬಿಹಾರದ ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್, ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ನಾನು ಅಯೋಧ್ಯೆಗೆ ಹೋಗುವುದಿಲ್ಲ ಎಂದು ತಿಳಿಸಿದರು. ಇದೇ ವೇಳೆ, ಮುಂಬರುವ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಸೀಟು ಹಂಚಿಕೆ ಸೂತ್ರವನ್ನು ಇನ್ನೂ ಅಂತಿಮಗೊಂಡಿಲ್ಲ. ಎಲ್ಲವೂ ಪ್ರಕ್ರಿಯೆ ಹಂತದಲ್ಲಿದೆ ಎಂದರು.
ಈ ನಾಯಕರೆಲ್ಲ ಕಾರ್ಯಕ್ರಮದಿಂದ ದೂರ.. ದೂರ: ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ಅಧೀರ್ ರಂಜನ್ ಚೌಧರಿ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಆಹ್ವಾನವನ್ನು ಗೌರವಪೂರ್ವಕವಾಗಿ ತಿರಸ್ಕರಿಸಿದ್ದಾರೆ. ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯು ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕ್ರಮವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೇ, ಉತ್ತರ ಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಸಹ ಅಯೋಧ್ಯೆಯ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಾಯಶ್ಚಿತ್ತ, ಕರ್ಮಕುಟಿ ಪೂಜೆಯೊಂದಿಗೆ ರಾಮಲಲ್ಲಾ ಪಟ್ಟಾಭಿಷೇಕದ ವಿಧಿವಿಧಾನ ಆರಂಭ