ಮಧುಬನಿ (ಬಿಹಾರ) : ಆನ್ಲೈನ್ ಫ್ಯಾಂಟಸಿ ಪ್ಲಾಟ್ಫಾರ್ಮ್ ಡ್ರೀಮ್ 11ನಲ್ಲಿ ರಾಜ್ಯದ ಮಧುಬನಿ ಜಿಲ್ಲೆಯ ಯುವಕ ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ. ಆಸ್ಟ್ರೇಲಿಯಾದ ಬ್ಯಾಷ್ ವಿನ್ನಿಂಗ್ ಸ್ಪರ್ಧೆಯಲ್ಲಿ ಇವರು ರಚಿಸಿದ ತಂಡ ಯಶಸ್ವಿಯಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ ಬದುಕು ಬದಲಿಸಿದೆ. ಕೋಟಿ ಗೆದ್ದ ಯುವಕನ ಹೆಸರು ಶಾನು ಕುಮಾರ್ (19 ವರ್ಷ). ಈತ ಕಿರಾಣಿ ಉದ್ಯಮಿ ರಾಜೇಶ್ ಮೆಹ್ತಾ ಎಂಬವರ ಪುತ್ರ.
ಶಾನು ಕುಮಾರ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ದೆಹಲಿಯಲ್ಲಿ ಉಳಿದುಕೊಂಡಿರುವ ಈತ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದುಕೊಳ್ಳುತ್ತಿದ್ದಾನೆ. "ನನಗೆ ಮೊದಲು ನಂಬಲು ಸಾಧ್ಯವಾಗಲಿಲ್ಲ. ನನ್ನ ಮೊಬೈಲ್ಗೆ ಬಂದ ಮೆಸೇಜ್ ನೋಡಿ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿತ್ತು. ಕ್ರಿಕೆಟಿಗನಾಗುವ ಆಸೆ ಇದೆ. ಈಗ ಬಂದಿರುವ ಹಣವನ್ನು ತಂದೆಗೆ ನೀಡಿದ್ದೇನೆ. ಇದರಿಂದ ಅವರ ವ್ಯಾಪಾರಕ್ಕೆ ಅನುಕೂಲವಾಗಲಿದೆ. ನಾನು ಉತ್ತಮ ಕ್ರಿಕೆಟ್ ತರಬೇತಿ ಪಡೆದುಕೋಳ್ಳುತ್ತೇನೆ" ಎಂದು ಶಾನು ಕುಮಾರ್ ಖುಷಿ ಹಂಚಿಕೊಂಡರು.
ಈ ಹಿಂದೆ ಬಿಹಾರದ ನವಾಡಾದ ಅಕ್ಬರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪ್ರಾ ಖುರ್ದ್ ಗ್ರಾಮದ ನಿವಾಸಿ ರಾಜು ರಾಮ್ ಎಂಬರು ಡ್ರೀಮ್ 11ನಲ್ಲಿ ಒಂದು ಕೋಟಿ ರೂಪಾಯಿ ಗೆದ್ದಿದ್ದರು. ಇವರು ಡಿಜೆಯಾಗಿ ಕೆಲಸ ಮಾಡುತ್ತಿದ್ದಾರೆ. ತೆರಿಗೆ ಕಡಿತವಾಗಿ ಇವರಿಗೆ 70 ಲಕ್ಷ ರೂ. ಸಿಕ್ಕಿತ್ತು. ಇವರಲ್ಲದೇ ಭೋಜ್ಪುರ ಜಿಲ್ಲೆಯ ಚಾರ್ಪೋಖಾರಿ ಬ್ಲಾಕ್ನ ಠಾಕುರಿ ಗ್ರಾಮದ ಯುವಕ ಸೌರಭ್ ಕೂಡ 49 ರೂಪಾಯಿ ವ್ಯಯಿಸಿ ಒಂದು ಕೋಟಿ ಗೆದ್ದು ಸುದ್ದಿಯಾಗಿದ್ದರು.
ಚಾಲಕನಿಗೆ ಒಲಿದ 2 ಕೋಟಿ: ಬಿಹಾರದ ಸರನ್ ಜಿಲ್ಲೆಯ ರಮೇಶ್ ಕುಮಾರ್ ಎಂಬ ಚಾಲಕ ಬಿಡುವಿನ ವೇಳೆ ಫ್ಯಾಂಟಸಿ ಕ್ರಿಕೆಟ್ ಗೇಮ್ ಆಡುತ್ತಿದ್ದರು. ಇವರ ಕುಟುಂಬವು ಕಷ್ಟದಲ್ಲಿ ಜೀವನ ನಡೆಸುತ್ತಿತ್ತು. ತಂದೆಯ ದಿನಗೂಲಿಯಲ್ಲಿಯೇ ಸಂಸಾರ ಸಾಗುತ್ತಿತ್ತು. ಆದರೆ ಅದೃಷ್ಟಲಕ್ಷ್ಮೀ ಈ ಕುಟುಂಬಕ್ಕೆ ರಾತ್ರೋರಾತ್ರಿ ಒಲಿದು ಬಂದಿದ್ದಳು. ಇದೇ ಡ್ರೀಮ್11 ನಲ್ಲಿ 2 ಕೋಟಿ ಗೆದ್ದು ಹುಬ್ಬೇರಿಸಿದ್ದರು.
ಇದನ್ನೂ ಓದಿ: ಬ್ಯುಸಿನೆಸ್ ಹೆಸರಲ್ಲಿ ಸ್ಟಾರ್ ಕ್ರಿಕೆಟಿಗ ದೀಪಕ್ ಚಾಹರ್ ಪತ್ನಿಗೆ 10 ಲಕ್ಷ ರೂ ಮೋಸ