ಪೋರ್ಟ್ಬ್ಲೇರ್(ಅಂಡಮಾನ್): ವೀರ ಸಾವರ್ಕರ್ ಅವರ ದೇಶಪ್ರೇಮ ಮತ್ತು ಶೌರ್ಯ ಪ್ರಶ್ನಾತೀತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಅನುಮಾನಿಸುವವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಮಂದಿಯನ್ನು ಬ್ರಿಟಿಷರು ಬಂಧಿಸಿಟ್ಟಿದ್ದ ಅಂಡಮಾನ್ ನಿಕೋಬಾರ್ನ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿದ್ದ ಅಮಿತ್ ಶಾ ವಿ.ಡಿ. ಸಾವರ್ಕರ್ ಅವರಿದ್ದ ಜೈಲಿಗೆ ತೆರಳಿ, ಅಲ್ಲಿನ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಇದೇ ವೇಳೆ ಅಜಾದಿ ಕಾ ಅಮೃತ್ ಮಹೋತ್ಸವ್ ಸಮಾರಂಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಎರಡು ಬಾರಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯನ್ನು ನೀವು ಹೇಗೆ ಅನುಮಾನಿಸುತ್ತೀರಿ..? ಸೆಲ್ಯುಲಾರ್ ಜೈಲಿನ ಗಾಣದ ಎತ್ತಿನಂತೆ ಬೆವರು ಸುರಿಸಿದ್ದ ವ್ಯಕ್ತಿಯನ್ನು ಹೇಗೆ ಅನುಮಾನಿಸಲು ಸಾಧ್ಯ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
ಸಾವರ್ಕರ್ ತಾವು ಸುಖವಾಗಿ ಬದುಕಲು ಬೇಕಾದ ಎಲ್ಲವನ್ನೂ ಹೊಂದಿದ್ದರು. ಆದರೆ ಅವರು ಕಠಿಣ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದು ತಾಯ್ನಾಡಿನ ಬಗ್ಗೆ ಅವರಿಗಿದ್ದ ಅಚಲವಾದ ದೇಶಪ್ರೇಮವನ್ನು ಸೂಚಿಸುತ್ತದೆ. ಸೆಲ್ಯೂಲಾರ್ ಜೈಲಿಗಿಂತ ಅತಿ ದೊಡ್ಡ ಪುಣ್ಯಕ್ಷೇತ್ರ ಮತ್ತೊಂದಿಲ್ಲ. ಸಾವರ್ಕರ್ ಸುಮಾರು 10 ವರ್ಷಗಳ ಕಾಲ ಅಮಾನವೀಯ ಚಿತ್ರಹಿಂಸೆಗೆ ಒಳಗಾದ ಈ ಜೈಲು 'ಮಹಾತೀರ್ಥ' ಎಂದು ಬಣ್ಣಿಸಿದರು.
ಸಾವರ್ಕರ್ ಅವರಿಗೆ ವೀರ್ ಎಂಬ ಬಿರುದು ಯಾವ ಸರ್ಕಾರವೂ ನೀಡಿಲ್ಲ. ಸಾವರ್ಕರ್ ಅವರ ಸ್ಫೂರ್ತಿ, ಧೈರ್ಯವನ್ನು ಕಂಡು ಜನರೇ ಸಾವರ್ಕರ್ ಅವರಿಗೆ ಬಿರುದು ನೀಡಿದ್ದಾರೆ. ಭಾರತದ 130 ಕೋಟಿ ಮಂದಿ ಸಾವರ್ಕರ್ ಅವರಿಗೆ ನೀಡಿರುವ ಬಿರುದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ಪಾಕ್ ಗುಪ್ತಚರ ಇಲಾಖೆಗೆ ಸೇನಾ ಮಾಹಿತಿ ರವಾನಿಸಿದ್ದ ಆರೋಪಿಗೆ ಪೊಲೀಸ್ ಕಸ್ಟಡಿ