ಬರ್ಲಿನ್: ಲುಧಿಯಾನ ಕೋರ್ಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಕಾರ್ಯಕರ್ತ ಜಸ್ವಿಂದರ್ ಸಿಂಗ್ ಮುಲ್ತಾನಿಯನ್ನು ಜರ್ಮನಿಯ ಪೊಲೀಸರು ಬಂಧಿಸಿದ್ದಾರೆ.
ಚುನಾವಣಾ ಭರಾಟೆಯಲ್ಲಿರುವ ಪಂಜಾಬ್‌ನಲ್ಲಿ ವಿಧ್ವಂಸಕ ಕೃತ್ಯ ಮತ್ತು ದೇಶದ ಇತರೆಡೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಮುಲ್ತಾನಿ ಯೋಜಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈತ ಖಲಿಸ್ತಾನ್ ಪರ ಭಯೋತ್ಪಾದಕನಾಗಿದ್ದು, ಜರ್ಮನಿಯ ಎರ್ಫುರ್ಟ್ ಎಂಬಲ್ಲಿ ನೆಲೆಸಿದ್ದ. ಆರೋಪಿ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಉತ್ತೇಜಿಸುವ ಎಸ್‌ಎಫ್‌ಜೆ ಸಂಘಟನೆಯೊಂದಿಗೆ ನಿಕಟ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಶಸ್ತ್ರಸಜ್ಜಿತ ಅಪ್‌ಗ್ರೇಡೆಡ್ ಕಾರು: ಬೆಲೆ, ವಿಶೇಷತೆ ಹೀಗಿದೆ..
ಡಿ.23ರ ಗುರುವಾರ ಲುಧಿಯಾನ ಕೋರ್ಟ್‌ನಲ್ಲಿ ನಡೆದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಕನಿಷ್ಠ ಐವರು ಗಾಯಗೊಂಡಿದ್ದರು. ಸ್ಥಳೀಯ ದುಷ್ಕರ್ಮಿಗಳ ಮೂಲಕ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸಿವೆ ಎಂದು ಪ್ರಾಥಮಿಕ ತನಿಖೆಯ ಮೂಲಕ ತಿಳಿದು ಬಂದಿತ್ತು. ಕಟ್ಟಡಕ್ಕೆ ಗರಿಷ್ಠ ಹಾನಿ ಉಂಟು ಮಾಡಲು ಮತ್ತು ಸಾಧ್ಯವಾದಷ್ಟು ಜನರನ್ನು ಹತ್ಯೆ ಮಾಡಲು ದಾಳಿಕೋರರು ನೆಲ ಮಹಡಿಯಲ್ಲಿ ಬಾಂಬ್ ಫಿಕ್ಸ್ ಮಾಡಲು ಉದ್ದೇಶಿಸಿದ್ದರು. ಆದರೆ ಬಾಂಬ್ ಫಿಕ್ಸ್ ಮಾಡುವ ವೇಳೆ ಸ್ಫೋಟಕ ವಸ್ತುಗಳು ಸ್ಫೋಟಗೊಂಡಿದ್ದವು.
2007ರಲ್ಲಿ ಸ್ಥಾಪಿತವಾದ ಸಿಖ್ಸ್ ಫಾರ್ ಜಸ್ಟಿಸ್ ಪ್ರಾಥಮಿಕವಾಗಿ ಅಮೆರಿಕ ಮೂಲದ ಸಂಘಟನೆ. ಪಂಜಾಬ್‌ನಲ್ಲಿ ಸಿಖ್ಖರಿಗೆ ಪ್ರತ್ಯೇಕ ತಾಯ್ನಾಡಿನ ಬೇಡಿಕೆಯನ್ನು ‘ಖಲಿಸ್ತಾನ್’ ಹೋರಾಟ ಎಂದು ಕರೆಯಲಾಗುತ್ತದೆ. ಈ ಸಂಘಟನೆಯನ್ನು 2019ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆಯ ಅಡಿಯಲ್ಲಿ ಭಾರತ ಸರ್ಕಾರ ನಿಷೇಧಿಸಿದೆ.
ಇದನ್ನೂ ಓದಿ: Night Curfew: ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ, ಏನೆಲ್ಲಾ ನಿರ್ಬಂಧಗಳು?
ಸಂಚುಕೋರ ಮುಲ್ತಾನಿ ಇತ್ತೀಚೆಗೆ ತನ್ನ ಪಾಕಿಸ್ತಾನ ಮೂಲದ ಕಾರ್ಯಕರ್ತರು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರ ಸಹಾಯದಿಂದ ಗಡಿಯಾಚೆಯಿಂದ ಪಂಜಾಬ್‌ಗೆ ಸ್ಫೋಟಕಗಳು, ಹ್ಯಾಂಡ್ ಗ್ರೆನೇಡ್‌ಗಗಳನ್ನು ಒಳಗೊಂಡಿರುವ ಶಸ್ತ್ರಾಸ್ತ್ರಗಳ ರವಾನೆ ಮಾಡಿರುವುದು ಗೊತ್ತಾಗಿತ್ತು.
ವಿಶ್ವಾಸರ್ಹ ಮೂಲಗಳ ಪ್ರಕಾರ, ಪಂಜಾಬ್ ಮೂಲದ ಕಾರ್ಯಕರ್ತರಿಗೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನದಿಂದ ಸ್ಫೋಟಕ ವಸ್ತುಗಳನ್ನು ಕಳುಹಿಸಲು ಮುಲ್ತಾನಿ ಯೋಜಿಸುತ್ತಿದ್ದನಂತೆ. ಈತ ಹರ್ದೀಪ್ ಸಿಂಗ್ ನಿಜ್ಜೆರ್, ಪರಮ್ಜಿತ್ ಸಿಂಗ್ ಪಮ್ಮಾ, ಸಬಿ ಸಿಂಗ್, ಕುಲ್ವಂತ್ ಸಿಂಗ್ ಮೊಥಡಾ ಮತ್ತು ಇತರ ಖಲಿಸ್ತಾನಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ.