ಪಲ್ವಾಲ್ (ಹರಿಯಾಣ): ಇನ್ನೂ ಏನೆಂದು ಪತ್ತೆ ಮಾಡಲಾಗದ ನಿಗೂಢ ಜ್ವರದಿಂದಾಗಿ ಕಳೆದ 10 ದಿನಗಳಲ್ಲಿ ಹರಿಯಾಣದ ಕೆಲ ಗ್ರಾಮಗಳಲ್ಲಿ 24 ಮಕ್ಕಳು ಸಾವನ್ನಪ್ಪಿದ್ದು, ಜನರು ಕಂಗಾಲಾಗಿದ್ದಾರೆ.
ಹರಿಯಾಣದ ಪಲ್ವಾಲ್ ಜಿಲ್ಲೆಯ ಹಾಥಿನ್ ಪ್ರದೇಶದ ಚಿಲ್ಲಿ ಗ್ರಾಮದಲ್ಲಿ ಪುಟ್ಟ ಕಂದಮ್ಮಗಳೂ ಸೇರಿದಂತೆ ಜ್ವರದಿಂದ ಬಳಲುತ್ತಿದ್ದ 11 ಮಕ್ಕಳು, ಚೈಂಸಾ ಗ್ರಾಮದಲ್ಲಿ 8 ಮತ್ತು ಸೌಂದ್ ಗ್ರಾಮದಲ್ಲಿ ಐವರು ಮಕ್ಕಳು ಮೃತಪಟ್ಟಿದ್ದಾರೆ.
ಈ ಪೈಕಿ ಒಂದು ಮಗು ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿತ್ತು. ಚಿಕಿತ್ಸೆಗಾಗಿ ನಲ್ಹಾದ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ. ಹಾಥಿನ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಇನ್ನೊಂದು 9 ತಿಂಗಳ ಮಗುವಿನ ರಕ್ತದ ಪ್ಲೇಟ್ಲೆಟ್‌ಗಳ ಸಂಖ್ಯೆ 90,000 ಕ್ಕಿಂತಲೂ ಕಡಿಮೆಯಾಗಿತ್ತು. ವೈದ್ಯರು ಈ ಕಂದಮ್ಮ ಡೆಂಗ್ಯೂಯಿಂದ ಮೃತಪಟ್ಟಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಇಂಜೆಕ್ಷನ್ ತೆಗೆದುಕೊಂಡು ಆಸ್ಪತ್ರೆ ಸಿಬ್ಬಂದಿ ಆತ್ಮಹತ್ಯೆ: ಸಾವಿನ ಬಗ್ಗೆ ಕುಟುಂಬಸ್ಥರ ಸಂಶಯ
ಆದರೆ ಗ್ರಾಮಸ್ಥರ ಪ್ರಕಾರ ಹಾಥಿನ್ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಮಕ್ಕಳು ವಿಚಿತ್ರ ಜ್ವರದಿಂದ ಬಳಲುತ್ತಿದ್ದಾರೆ. ಈ ನಿಗೂಢ ಜ್ವರ ಏನೆಂದು ಇನ್ನೂ ಪತ್ತೆ ಮಾಡದ ಹರಿಯಾಣ ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ.