ವಿಶಾಖಪಟ್ಟಣ (ಆಂಧ್ರ ಪ್ರದೇಶ): ಪಶ್ಚಿಮ ಬಂಗಾಳದಿಂದ ಆಮದು ಮಾಡಿಕೊಂಡು ವಿಶಾಖಪಟ್ಟಣದಲ್ಲಿ ಅಕ್ರಮವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ ಏಳು ಸಾವಿರಕ್ಕೂ ಅಧಿಕ ಮಾದಕ ದ್ರವ್ಯ ಚುಚ್ಚುಮದ್ದುಗಳನ್ನು ಆಂಧ್ರ ಪ್ರದೇಶದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಟಾಸ್ಕ್ ಫೋರ್ಸ್ ಮತ್ತು ಎಸ್‌ಇಬಿ ಅಧಿಕಾರಿಗಳು ನಗರದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಡ್ರಗ್ ಇಂಜೆಕ್ಷನ್‌ಗಳನ್ನು ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಪೊಲೀಸ್ ಕಮಿಷನರ್ ತ್ರಿವಿಕ್ರಮ ವರ್ಮಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ವಿಶ್ವಾಸಾರ್ಹ ಮೂಲಗಳ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆ ಚುಚ್ಚುಮದ್ದುಗಳನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಅರಿವಳಿಕೆಗೆ ಮಾತ್ರ ಬಳಸಲಾಗುತ್ತದೆ. ಅವುಗಳನ್ನು ಸಂಶ್ಲೇಷಿತ ಔಷಧಗಳು ಎಂದು ಕರೆಯಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಜೀವಕ್ಕೆ ಅಪಾಯ ಇರುತ್ತದೆ ಎಂದು ತಿಳಿಸಿದರು.
ಮೇ 14 ಮತ್ತು 17ರಂದು ಸೆಂಕೆಂಡ್ ಟೌನ್ ಠಾಣೆಯ ಟಾಸ್ಕ್ ಫೋರ್ಸ್ ಪೊಲೀಸರು ದಾಳಿ ನಡೆಸಿ 4,150 ಮಾದಕ ಚುಚ್ಚುಮದ್ದಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಮಾರಾಟ ಮಾಡುತ್ತಿದ್ದ ಕೆ.ಹರಿಪದ್ಮ ರಾಘವರಾವ್, ಬಿ.ಶ್ರೀನು, ಬಿ.ಲಕ್ಷ್ಮಿ, ಜಿ.ವೆಂಕಟಸಾಯಿ, ಪಿ.ರವಿ, ಕೆ.ಚಿರಂಜೀವಿ ಎಂಬುವವರನ್ನು ಬಂಧಿಸಲಾಗಿದೆ. ಖರಗಪುರದ ಪಿ.ಅಪ್ಪಲರಾಜು, ಪಿತಾನಿ ರವಿ, ಸತ್ಯಂ, ವಿ.ಜಗದೀಶ್ ಮತ್ತು ದುರ್ಗಾಪ್ರಸಾದ್ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈಗಾಗಲೇ ಆರೋಪಿ ಹರಿಪದ್ಮ ರಾಘವರಾವ್ ವಿರುದ್ಧ ಒಂಭತ್ತು ಪ್ರಕರಣಗಳಿವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಮತ್ತೊಂದೆಡೆ, ಮಧುರವಾಡದ ಸೀತಮ್ಮಧಾರ ಕನಕಪು ಪ್ರದೇಶದಲ್ಲಿ ಎಸ್‌ಇಬಿ ಅಧಿಕಾರಿಗಳು ದಾಳಿ ನಡೆಸಿ 3,100 ಚುಚ್ಚುಮದ್ದಗಳನ್ನು ಜಪ್ತಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಜಿ.ಉಮಾಮಹೇಶ್ ಮತ್ತು ಬಿ.ವೆಂಕಟೇಶ್ ಎಂಬುವವರನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ಬಿಮಲ್ ಎಂಬ ವ್ಯಕ್ತಿ ವಿಶಾಖಪಟ್ಟಣ ನಗರಕ್ಕೆ ಮಾದಕ ದ್ರವ್ಯ ಚುಚ್ಚುಮದ್ದುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಗಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆತನ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳನ್ನು ಕೋಲ್ಕತ್ತಾಗೆ ರವಾನಿಸಲಾಗುವುದು ಎಂದು ತ್ರಿವಿಕ್ರಮ ವರ್ಮಾ ವಿವರಿಸಿದರು.
ಈ ಹಿಂದೆ ಕೂಡ ಮಾದಕ ದ್ರವ್ಯ ಚುಚ್ಚುಮದ್ದುಗಳ ಅಕ್ರಮ ಮಾರಾಟ ಮಾಡುತ್ತಿದ್ದ ಅಧಿಕಾರಿಯೊಬ್ಬರನ್ನು ವಿಶಾಖಪಟ್ಟಣ ಪೊಲೀಸರು ಬಂಧಿಸಿದ್ದರು. ನಗರ ನಿವಾಸಿಯಾಗಿದ್ದ ಆ ಅಧಿಕಾರಿ ಖರಗ್‌ಪುರದಿಂದ ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ತಂದು ಮಾರಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಸದ್ಯ ಬಿಮಲ್ ಸಹ ಇಂತಹ ದಂಧೆ ಆರಂಭಿಸಿರುವುದು ಪತ್ತೆಯಾಗಿದೆ. ಈ ಆರೋಪಿಯಿಂದ ವಿಶಾಖಪಟ್ಟಣದ ಹತ್ತು ಜನ ಸ್ಥಳೀಯ ವರ್ತಕರು ಚುಚ್ಚುಮದ್ದುಗಳನ್ನು ಖರೀದಿಸುತ್ತಿದ್ದಾರೆ. ಅವುಗಳನ್ನು ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ
ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ಈ ಅರಿವಳಿಕೆ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ. ಮೆದುಳಿನ ಮೇಲೆ ಇದು ಹೆಚ್ಚು ಪರಿಣಾಮ ಬೀರುತ್ತದೆ. ಡೋಸ್ ಹೆಚ್ಚಾದರೆ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆಯೂ ಇರುತ್ತದೆ. ಕೆಲವೊಮ್ಮೆ ಜೀವಕ್ಕೆ ಅಪಾಯಕ್ಕೂ ಇರುತ್ತದೆ.
ಇದನ್ನೂ ಓದಿ: ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಕೇಸ್: ತಾಯಿಯ ಅನಾರೋಗ್ಯದ ಕಾರಣ ನೀಡಿ ಸಿಬಿಐ ವಿಚಾರಣೆಗೆ ಕಡಪ ಸಂಸದ ಗೈರು