ನವದೆಹಲಿ: ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯನ್ನು ಸೆಪ್ಟೆಂಬರ್‌ನಿಂದ ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಉತ್ಪಾದನಾ ಘಟಕಗಳಲ್ಲಿ ಉತ್ಪಾದಿಸಲಾಗುವುದು. ಭಾರತದಲ್ಲಿ ವರ್ಷಕ್ಕೆ 300 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಉದ್ದೇಶ ಹೊಂದಲಾಗಿದೆ. ಈ ಕುರಿತ ತಂತ್ರಜ್ಞಾನ ವರ್ಗಾವಣೆ ಈಗಾಗಲೇ ಪ್ರಾರಂಭವಾಗಿದೆ ಮತ್ತು ಮೊದಲ ಹಂತದ ಲಸಿಕೆಗಳನ್ನು ಸೆಪ್ಟೆಂಬರ್‌ನಲ್ಲಿ ನಿರೀಕ್ಷಿಸಲಾಗಿದೆ.
"ಸ್ಪುಟ್ನಿಕ್ ಲಸಿಕೆ ತಯಾರಿಸಲು ರಷ್ಯಾದೊಂದಿಗೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗಿದೆ. ಸೆಪ್ಟೆಂಬರ್ ತಿಂಗಳಿಂದ ಪ್ರಾರಂಭವಾಗುವ ಟ್ರಯಲ್ ಬ್ಯಾಚ್‌ಗಳೊಂದಿಗೆ ಮುಂಬರುವ ದಿನಗಳಲ್ಲಿ ಲಕ್ಷಾಂತರ ಪ್ರಮಾಣದ ಲಸಿಕೆ ಡೋಸ್‌ಗಳ ಉತ್ಪಾದನೆ ಮಾಡಲು ನಾವು ಎದುರು ನೋಡುತ್ತಿದ್ದೇವೆ" ಎಂದು ಸೀರಮ್ ಸಂಸ್ಥೆಯ ಮುಖ್ಯಸ್ಥ ಆದರ್ ಪೂನವಾಲಾ ಹೇಳಿದರು.
ಭವಿಷ್ಯದಲ್ಲಿ ಹೆಚ್ಚಿನ ಪರಿಣಾಮಕಾರಿತ್ವ ಮತ್ತು ಉತ್ತಮ ಸುರಕ್ಷತಾ ಕ್ರಮಗಳೊಂದಿಗೆ ಭಾರತ ಮತ್ತು ಪ್ರಪಂಚದಾದ್ಯಂತದ ಜನರಿಗೆ ಸ್ಪುಟ್ನಿಕ್ ಲಸಿಕೆ ಪೂರ್ಣ ಪ್ರಮಾಣದಲ್ಲಿ ಸಿಗಬಹುದು ಎಂದು ಅವರು ಹೇಳಿದರು.