ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಸಂಸತ್ ಭವನ ಹಾಗು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ ಮತದಾನ ನಡೆದಿದ್ದು, ಮತಪೆಟ್ಟಿಗೆಗಳನ್ನು ವಿಮಾನದ ಮೂಲಕ ದೆಹಲಿಗೆ ಒಯ್ಯಲಾಗುತ್ತಿದೆ. ವಿಶೇಷ ಅಂದರೆ, ಮನುಷ್ಯನಂತೆಯೇ ಈ ಮತಪೆಟ್ಟಿಗೆಗಳಿಗೂ ಪ್ರತ್ಯೇಕ ಸೀಟು ಕಾಯ್ದಿರಿಸಿ ಅವುಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ.
ಮತ ಪೆಟ್ಟಿಗೆ ಹೊತ್ತ ಅಧಿಕಾರಿಗೆ ಒಂದು ಸೀಟಾದರೆ, ಬ್ಯಾಲೆಟ್ ಬಾಕ್ಸ್ಗೇ ಪ್ರತ್ಯೇಕ ಸೀಟನ್ನು 'ಮಿಸ್ಟರ್ ಬ್ಯಾಲೆಟ್ ಬಾಕ್ಸ್' ಹೆಸರಲ್ಲಿ ಕಾಯ್ದಿರಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮತಪೆಟ್ಟಿಗೆಗಳನ್ನು ತೆಗೆದುಕೊಂಡು ಬರಲು ಈ ಟಿಕೆಟ್ಗಳನ್ನು ಕಾಯ್ದಿರಿಸಿತ್ತು.
ಈ ಹಿಂದೆ ಮತ ಪೆಟ್ಟಿಗೆಗಳನ್ನು ಚುನಾವಣಾ ಅಧಿಕಾರಿಗಳು ಅದನ್ನು ಕೈಯಲ್ಲಿ ಹ್ಯಾಂಡ್ ಬ್ಯಾಗ್ನಂತೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈ ವರ್ಷ ಆಯೋಗವು ಮತಪೆಟ್ಟಿಗೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪ್ರತ್ಯೇಕ ವ್ಯವಸ್ಥೆ ಮಾಡಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದ್ದು, ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳಿಂದ ಯಶವಂತ್ ಸಿನ್ಹಾರ ಭವಿಷ್ಯ ನಿರ್ಧಾರವಾಗಲಿದೆ.
ಮತಪೆಟ್ಟಿಗೆಗೆ ಪ್ರತ್ಯೇಕ ವಿಮಾನ ಟಿಕೆಟ್ ಏಕೆ?: ಈ ಬಗ್ಗೆ ಚುನಾವಣಾ ಆಯೋಗ ಹೇಳಿಕೆ ನೀಡಿದ್ದು, "ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಯಲ್ಲಿ ಮತಪೆಟ್ಟಿಗೆ ಪ್ರಮುಖ ಪಾತ್ರವನ್ನು ಹೊಂದಿದೆ. ಇದು ಸಾಮಾನ್ಯ ಚುನಾವಣೆಯಾಗಿರದೇ, ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅಧ್ಯಕ್ಷರ ಭವಿಷ್ಯ ಈ ಪೆಟ್ಟಿಗೆಗಳಲ್ಲಿ ಅಡಗಿರುತ್ತದೆ. ಹೀಗಾಗಿ, ಪೆಟ್ಟಿಗೆಗಳ ಸಾಗಣೆ, ಸಂಗ್ರಹಣೆ ಮತ್ತು ಬಳಕೆಯ ಸಮಯದಲ್ಲಿ ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗಿದ್ದು, ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿದವರ ವಿರುದ್ಧ ಪ್ರಕರಣ ದಾಖಲು