ಚೆನ್ನೈ, ತಮಿಳುನಾಡು: ಟೈಪೋ ಮಾಡಿದ ಸ್ವಲ್ಪ ತಪ್ಪಿಗೆ ಅತ್ಯಾಚಾರ ಅಪರಾಧಿಯೊಬ್ಬ ಖುಲಾಸೆಗೊಂಡು, ಮತ್ತೆ ಮದ್ರಾಸ್ ಹೈಕೋರ್ಟ್ನಿಂದ ಶಿಕ್ಷೆಗೆ ಒಳಗಾಗಿರುವ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ನಡೆದಿದ್ದು ಏನು?
2017ರಲ್ಲಿ ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಮಗಳನ್ನು ನೆರೆ ಮನೆಯಾತನ ಬಳಿ ಬಿಟ್ಟು ದಿನಸಿ ತರಲು ಹೊರಟ್ಟಿದ್ದಳು. ವಾಪಸ್ ಬಂದಾಗ ವ್ಯಕ್ತಿ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಬಗ್ಗೆ ಸಂಶಯಗೊಂಡು, ಪೊಲೀಸರಿಗೆ ದೂರು ನೀಡಿದ್ದಳು.
ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಪೊಲೀಸರಿಗೆ ಆರೋಪಿ 'ಲೈಂಗಿಕ ಕಿರುಕುಳ' ನೀಡಿರುವುದು ದೃಢಪಟ್ಟಿತ್ತು. ಈ ಕುರಿತು ಪೋಕ್ಸೋ ಕೋರ್ಟ್ನಲ್ಲಿ ದೂರು ದಾಖಲಾಗಿತ್ತು. ಆದರೆ, ವಿಚಾರಣೆ ನಡೆಸಿದ ಕೋರ್ಟ್ ' ಅತ್ಯಾಚಾರ ನಡೆದಿವೆ ಎಂಬುದಕ್ಕೆ ಸರಿಯಾದ ಆಧಾರಗಳಿಲ್ಲ' ಎಂದು ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಪೋಕ್ಸೋ ಕೋರ್ಟ್ ಖುಲಾಸೆಗೊಳಿಸಿದ್ದೇಕೆ?
ಪೋಕ್ಸೋ ಕೋರ್ಟ್ ವಿಚಾರಣೆ ನಡೆಸುವ ವೇಳೆ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ನಲ್ಲಿ ಸೆಮೆನ್ (semen- ವೀರ್ಯ) ಎಂಬ ಪದದ ಬದಲಿಗೆ semman (ಸೆಮ್ಮನ್- ತಮಿಳಿನಲ್ಲಿ ಕೆಂಪು ಮಣ್ಣು ಎಂಬ ಅರ್ಥವಿದೆ) ಎಂದು ನಮೂದಿಸಲಾಗಿತ್ತು.
ದೂರು ನೀಡುವ ವೇಳೆ ಬಾಲಕಿಯ ತಾಯಿ 'ಆರೋಪಿಯಿಂದ ಮಗಳನ್ನು ಮನೆಗೆ ಕರೆದುಕೊಂಡು ಹೋದಾಗ, ಮಗಳು ನೋವಿನಿಂದ ನರಳುತ್ತಿದ್ದಳು. ಊಟ ಮಾಡಲಿಲ್ಲ. ಆಕೆಯ ಒಳ ಉಡುಪುಗಳ ಮೇಲೆ ಬಳಿ ಬಿಳಿ ಬಣ್ಣದ ದ್ರವದ ಗುರುತು (ಆಕೆಯ ಅರ್ಥದಲ್ಲಿ ವೀರ್ಯದ (semen)) ಮತ್ತು ಗಾಯದ ಗುರುತು ಇತ್ತು' ಎಂದು ಹೇಳಿದ್ದಳು.
ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕಾದರೆ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಬೇಕಾದರೆ ವೀರ್ಯ(semen) ಟೈಪ್ ಮಾಡುವ ಬದಲಾಗಿ, ಸ್ಪೆಲ್ಲಿಂಗ್ ಮಿಸ್ಟೇಕ್ನಿಂದಾಗಿ ಸೆಮ್ಮನ್ (ಕೆಂಪು ಮಣ್ಣು) ಎಂದು ಟೈಪ್ ಮಾಡಲಾಗಿತ್ತು.
'ಬಾಲಕಿಯ ಖಾಸಗಿ ಭಾಗಗಳಲ್ಲಿ ಕೆಂಪು ಬಣ್ಣದ ಮಣ್ಣಿನ ಗುರುತು ಇತ್ತು' ಎಂದು ಪೋಕ್ಸೋ ಕೋರ್ಟ್ ಅರ್ಥೈಸಿ, 'ಸರಿಯಾದ ಆಧಾರಗಳಿಲ್ಲ' ಎಂದು ಹೇಳಿ, ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದರಿಂದ ಆರೋಪಿಗೆ ಸ್ವಲ್ಪ ರಿಲೀಫ್ ಸಿಕ್ಕಿತ್ತು.
ಇದನ್ನೂ ಓದಿ: ಈ ಗೋಲ್ಡ್ ಲೋನ್ ಬ್ರಾಂಚ್ನಲ್ಲಿ ಬರೋಬ್ಬರಿ 17 ಕೆಜಿ ಚಿನ್ನ ಲೂಟಿ: 5 ಲಕ್ಷ ನಗದು ದರೋಡೆ
ಈ ತೀರ್ಪನ್ನು ವಿರೋಧಿ ತಾಯಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿ, ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಸ್ಪೆಲ್ಲಿಂಗ್ ಮಿಸ್ಟೇಕ್ನಿಂದ ಅವಾಂತರ ನಡೆದಿರುವುದು ಗೊತ್ತಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿರುವ ಐದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದರ ಜೊತೆಗೆ ಕೋರ್ಟ್ಗಳ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದೆ.